ಮಂಗಳೂರು/ಉತ್ತರಕನ್ನಡ: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ರಾಷ್ಟ್ರಪತಿ ಭವನ ಪ್ರವೇಶಿಸುವ ಸಂದರ್ಭದಲ್ಲಿ ಸ್ವಾಗತಿಸುವ ಯಕ್ಷಗಾನದ ಗಾಯನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕರಾವಳಿಯ ಯುವ ಯಕ್ಷಪ್ರತಿಭೆ ಕು.ಚಿಂತನಾ ಹೆಗಡೆ ಮಾಳಕೋಡ್ ಅವರ ಕಂಠಸಿರಿಯ ಭಾಗವತಿಕೆಯಲ್ಲಿ 'ಹೆಜ್ಜೆ ಇಟ್ಟಿಹಳು ದ್ರೌಪದಿ ರಾಷ್ಟ್ರಪತಿಯ ಭವನದಲಿ' ಯಕ್ಷಗಾನ ಪದ್ಯ ಸಖತ್ ಟ್ರೆಂಡ್ ಆಗಿದೆ.
ಮಹಾಭಾರತ ಕಥೆಯ ಪ್ರಧಾನ ಪಾತ್ರ ದ್ರೌಪದಿಯ ಹೆಸರನ್ನು ಹೊಂದಿರುವ ನೂತನ ರಾಷ್ಟ್ರಪತಿಯನ್ನು ಮಹಾಭಾರತ ಪಾತ್ರಗಳಿಗೆ ಅನ್ವಯವಾಗುವಂತೆ ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರುವಂತೆ ಸಾಹಿತ್ಯ ರಚಿಸಲಾಗಿದೆ. ಮಹಾಭಾರತದ ಪಾತ್ರಗಳಿಗೆ ಅನ್ವಯಿಸಿರುವ ಈ ಸಾಹಿತ್ಯವು ಸದ್ಯ ಪರಿಹಾರವಾಗಬೇಕಾದ ಸಮಸ್ಯೆಗಳ ಬಗ್ಗೆಯೂ ಸೂಚ್ಯವಾಗಿ ರಾಷ್ಟ್ರಪತಿಯವರಿಗೆ ವಿನಂತಿ ಮಾಡುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳಕೋಡಿನ ಚಿಂತನಾ ಹೆಗಡೆ ವಿಶಿಷ್ಠವಾಗಿ ಯಕ್ಷಗಾನದ ಮಾದರಿಯಲ್ಲಿ ಹಾಡಿದ್ದಾರೆ. ಉಡುಪಿಯ ಅರವಿಂದ ಚಿಪ್ಳೂಣ್ಕರ್ ರವರು ಈ ಹಾಡನ್ನು ರಚಿಸಿದ್ದಾರೆ. ಚಿಂತನಾ ಯಕ್ಷಗಾನ ಕಲಾವಿದ ಕಲಾವಿದ ಉದಯ ಹೆಗಡೆ ಪುತ್ರಿಯಾಗಿದ್ದು, ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯಕ್ಷಗಾನದ ಹಾಡನ್ನು ಹೇಳುತ್ತಿದ್ದು, ಬಡಗುತಿಟ್ಟಿನ ಉದಯೋನ್ಮುಖ ಭಾಗವತಿಯಾಗಿ ಬೆಳೆಯುತ್ತಿದ್ದಾರೆ. ರಾಷ್ಟ್ರಪತಿ ಸ್ವಾಗತಿಸಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ದ್ರೌಪದಿ ಮುರ್ಮು: ಶಿಸ್ತುಬದ್ಧ ಜೀವನ, ಸಾತ್ವಿಕ ಆಹಾರ, ಸಾರ್ವಜನಿಕ ಸೇವೆಯೇ ಗುರಿ