ಮಂಗಳೂರು: ಮೂರು ವರ್ಷಕ್ಕೊಂದು ಬಾರಿ ಸದಸ್ಯತನ ಅಭಿಯಾನ ಹಾಗೂ ಅಧ್ಯಕ್ಷೀಯ ಆಯ್ಕೆಯನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಪಾರದರ್ಶಕವಾಗಿ ಮಾಡುವ ದೇಶದ ಏಕೈಕ ಪಕ್ಷ ಬಿಜೆಪಿ. ಆದ್ದರಿಂದಲೇ ಕಾಂಗ್ರೆಸ್ ವಿರೋಧ ಪಕ್ಷಕ್ಕೂ ನಾಲಾಯಕ್ ಆದಂತ ಪಕ್ಷವಾಗಿದೆ. ಭಾರತ ಜಗದ್ವಂದ್ಯ ರಾಷ್ಟ್ರವಾಗುವ ಕಾಲಘಟ್ಟದಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದ ಡೊಂಗರಕೇರಿಯ ಸಂಘಟನಾ ಪರ್ವ ಸದಸ್ಯತನಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ದೇಶದಲ್ಲಿ 12 ಕೋಟಿ ಮಂದಿ ಬಿಜೆಪಿ ಸದಸ್ಯರಾಗಿದ್ದರು. ಹಾಗಾಗಿ ಕಳೆದ ಬಾರಿ ನಮಗೆ ಬಂದ ಮತದಷ್ಟೇ ಸದಸ್ಯತನ ಆಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.50 ಮತ ಬಿಜೆಪಿಗೆ ದೊರಕಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ನಾಯಕ ಶ್ರೇಷ್ಠ ಅಲ್ಲ, ಕಾರ್ಯಕರ್ತ ಶ್ರೇಷ್ಠ. ಅನ್ನುವಂತಹ ಆಧಾರದಲ್ಲೇ ಕಾರ್ಯ ಪದ್ಧತಿ ಆರಂಭವಾಗಿದೆ. ಆ ಪದ್ಧತಿಯಲ್ಲಿ ಒಂದು ಸದಸ್ಯತ್ವ ಅಭಿಯಾನ. ಬಳಿಕ ಗ್ರಾಮ ಸಮಿತಿಗಳ ನಿರ್ಮಾಣ, ಮಂಡಲ ಸಮಿತಿಗಳ ನಿರ್ಮಾಣ, ಜಿಲ್ಲಾಧ್ಯಕ್ಷರ ಆಯ್ಕೆ, ರಾಜ್ಯಾಧ್ಯಕ್ಷರ ಆಯ್ಕೆ, ಬಳಿಕ ರಾಷ್ಟ್ರಾಧ್ಯಕ್ಷರ ಆಯ್ಕೆ. ಇದು ನಮ್ಮ ಕಾರ್ಯ ಪದ್ಧತಿಗಳಲ್ಲೊಂದು. ಜನಸಂಘ ಪಕ್ಷದಿಂದ ಈವರೆಗೆ ನಮ್ಮ ಪಕ್ಷ ಎಲ್ಲೂ ತಪ್ಪಿಲ್ಲ. ಹಾಗಾಗಿ 1980ರೊಳಗೆ ಹೊಸದಾಗಿ ರೂಪಿತವಾದರೂ ಇಷ್ಟರೊಳಗೆ ಹತ್ತಾರು ರಾಷ್ಟ್ರಾಧ್ಯಕ್ಷರು ಆಗಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ 20 ವರ್ಷಗಳಿಂದ ಸೋನಿಯಾ ಗಾಂಧಿಯೇ ರಾಷ್ಟ್ರಾಧ್ಯಕ್ಷರಾಗಿದ್ದರು. ಅಧಿಕಾರ ತಪ್ಪುತ್ತೆ ಅಂದಾಗ ಅವರೇ ಮಗನಿಗೆ ಪಟ್ಟ ಕಟ್ಟುತ್ತಾರೆ ಎಂದು ಲೇವಡಿ ಮಾಡಿದರು.
ಈ ಸಂದರ್ಭ ಆಟೋ ರಿಕ್ಷಾ ಚಾಲಕರಿಗೆ ಸದಸ್ಯತ್ವವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಮುಖಂಡರಾದ ಬ್ರಿಜೇಶ್ ಚೌಟ, ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ ಮತ್ತಿತರರು ಇದ್ದರು.