ಮಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ನಿರ್ಬಂಧ ಹೇರಿರುವ ಮಧ್ಯೆಯೇ ಇಂದು ಮತ್ತೆ 16 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದ್ದರು. ಆದ್ರೆ ಈ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶವನ್ನು ನಿರಾಕರಿಸಲಾಗಿದೆ. ಅಷ್ಟೇ ಅಲ್ಲದೇ ಉಪ್ಪಿನಂಗಡಿಯಲ್ಲಿ ಹಿಜಾಬ್ ನಿರ್ಬಂಧವನ್ನು ಉಲ್ಲಂಘಿಸಿದ ಆರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಇದರ ವಿರುದ್ಧ 16 ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಹೋರಾಟ ನಡೆಸುತ್ತಿದ್ದರು. ಜಿಲ್ಲಾಧಿಕಾರಿ ಜೊತೆಗೆ ಕಳೆದ ಸೋಮವಾರ ನಡೆದ ಮಾತುಕತೆಯಲ್ಲಿ ಜಿಲ್ಲಾಧಿಕಾರಿಗಳು ಸಿಂಡಿಕೇಟ್ ನಿರ್ಧಾರವನ್ನು ಪಾಲಿಸಬೇಕು ಎಂದು ಸೂಚಿಸಿದ್ದರು.
ಓದಿ: ಬುರ್ಖಾ ಧರಿಸಿ ನೃತ್ಯ ಮಾಡಿದ ಯುವಕರು: ಮುಸ್ಲಿಂ ಮುಖಂಡರ ಆಕ್ಷೇಪ, ಖಂಡನೆ
ಜಿಲ್ಲಾಧಿಕಾರಿ ಹೇಳಿಕೆ ಬಳಿಕ ಆ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿರಲಿಲ್ಲ. ಇಂದು ಮತ್ತೆ ಈ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದ್ದರು. ಆದ್ರೆ ಪ್ರಾಂಶುಪಾಲರಾದ ಡಾ. ಅನಸೂಯ ರೈ ಅವರು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ. ಪ್ರವೇಶ ನಿರಾಕರಣೆ ಹಿನ್ನೆಲೆ ವಿದ್ಯಾರ್ಥಿನಿಯರು ಕಾಲೇಜು ಲೈಬ್ರರಿ ಬಳಿ ಕುಳಿತುಕೊಂಡಿದ್ದರು.
ಉಪ್ಪಿನಂಗಡಿಯಲ್ಲಿ ಅಮಾನತು: ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ನಿರ್ಬಂಧವನ್ನು ಸತತವಾಗಿ ಉಲ್ಲಂಘಿಸಿದ ಆರು ಮಂದಿ ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಲಾಗಿದೆ. ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ಮಾಡಬಾರದು ಎಂಬ ಸರ್ಕಾರ ಮತ್ತು ಹೈಕೋರ್ಟ್ ಆದೇಶವನ್ನು ಇವರು ಉಲ್ಲಂಘಿಸಿದ್ದರು. ಕಾಲೇಜು ಉಪನ್ಯಾಸಕರ ಸಭೆಯ ತೀರ್ಮಾನದಂತೆ ಆರು ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ.