ಮಂಗಳೂರು: ಕೊರೊನಾ ಆತಂಕದ ನಡುವೆ ದ.ಕ ಜಿಲ್ಲಾಡಳಿತದಿಂದ ನಗರದ ನೆಹರೂ ಮೈದಾನದಲ್ಲಿ ಸರಳವಾಗಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಸಚಿವರು ಪೊಲೀಸ್ ಪರೇಡ್ ವೀಕ್ಷಣೆ ನಡೆಸಿ, ಗೌರವ ವಂದನೆ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಗಳಿಗೆ ಸನ್ಮಾನ ನೆರವೇರಿಸಲಾಯಿತು. ಈ ಸಂದರ್ಭ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲಾ ಮಹಾನೀಯರನ್ನು ಈ ದಿನ ಸ್ಮರಿಸೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ಸಂಭ್ರಮದ ದಿನವಷ್ಟೇ ಅಲ್ಲ, ಆತ್ಮಾವಲೋಕನದ ದಿನವೂ ಹೌದು.
ರಾಜಕೀಯವಾಗಿ ಸ್ವಾತಂತ್ರ್ಯವೇನೋ ಸಿಕ್ಕಿದೆ. ಆದರೆ ಎಲ್ಲಾ ವರ್ಗದ, ಜನಾಂಗದ ಜನಸಾಮಾನ್ಯರಿಗೆ, ಬಡವರಿಗೆ, ದಲಿತರಿಗೆ ಹಾಗೂ ದುರ್ಬಲ ವರ್ಗದವರಿಗೆ ಸ್ವಾತಂತ್ರ್ಯದ ಲಾಭ ಎಷ್ಟರ ಮಟ್ಟಿಗೆ ದೊರಕಿದೆ ಎಂಬ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಜೊತೆಗೆ ಜಾತಿ, ಧರ್ಮ ಭೇದಗಳನ್ನು ಕೊನೆಗಾಣಿಸಿ ಸರ್ವಧರ್ಮಗಳನ್ನು ಪೀತಿಸುವುದರ ಮೂಲಕ ನಾವೆಲ್ಲಾ ಭಾರತೀಯರು ಒಂದೇ ಎಂಬ ಮನೋಭಾವದಿಂದ ದೇಶವನ್ನು ಸುದೃಢ ರಾಷ್ಟ್ರವನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಬೇಕಾಗಿದೆ ಎಂದರು.
ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಬರಲು ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲಾಡಳಿತದ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನಿರ್ಬಂಧ ವಿಧಿಸಲಾಗಿತ್ತು.