ಮಂಗಳೂರು: ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಖ್ಯಾತ ವಕೀಲ ರಾಜೇಶ್ ಭಟ್ಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಓರ್ವನನ್ನು ಮಂಗಳೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಬೋಂದೆಲ್ನ ಅನಂತ ಭಟ್ (48) ಬಂಧಿತ. ಇಂಟರ್ನ್ಶಿಪ್ಗೆ ಬಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ವಕೀಲ ರಾಜೇಶ್ ಭಟ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸುತ್ತಿದ್ದು, ಇದರ ಬೆನ್ನಲ್ಲೇ ತಪ್ಪಿಸಿಕೊಳ್ಳಲು ಅನಂತ ಭಟ್ ಸಹಕರಿಸಿದ್ದಾರೆಂಬ ಆರೋಪದಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿರಿ: ಮಂಗಳೂರಿನ ಖ್ಯಾತ ವಕೀಲ ಕೆಎಸ್ಎನ್ ರಾಜೇಶ್ ಮೇಲೆ ಲೈಂಗಿಕ ಕಿರುಕುಳ ಆರೋಪ
ಅನಂತ ಭಟ್ ಅವರು ರಾಜೇಶ್ ಭಟ್ ಜೊತೆ ಸಂಪರ್ಕದಲ್ಲಿದ್ದರು. ಆರೋಪಿ ರಾಜೇಶ್ ಭಟ್ ನನ್ನು ಪೊಲೀಸರ ಬಂಧನಕ್ಕೆ ಸಿಗದಂತೆ ಸಹಕರಿಸಿದ್ದು, ಪ್ರಕರಣ ವರದಿಯಾದ ಕೂಡಲೇ ರಾಜೇಶ್ ಭಟ್ನನ್ನು ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ತಲೆಮರೆಸಿಕೊಳ್ಳಲು ಸಹಕರಿಸಿದ್ದಾರೆ. ರಾಜೇಶ್ ಭಟ್ ಅವರ ಕಾರು & ಮೊಬೈಲ್ ಪೋನ್ ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರಿಗೆ ಸಿಗದಂತೆ ಸಹಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಇವರ ಪಾತ್ರವನ್ನು ತಿಳಿದುಕೊಳ್ಳಲು ಮತ್ತು ರಾಜೇಶ್ ಭಟ್ ಪತ್ತೆ ಹಚ್ಚುವ ಸಲುವಾಗಿ ಅನಂತ ಭಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕಾರು & ಮೊಬೈಲ್ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಕೀಲ ರಾಜೇಶ್ ಭಟ್ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಮಂಗಳೂರಿನ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.