ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ದಿನದಲ್ಲಿ ನಡೆದ ಮೂರು ಕೊಲೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಆಗ್ರಹಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್, ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆ ಪ್ರಕರಣ, ಪ್ರವೀಣ್ ನೆಟ್ಟಾರು ಪ್ರಕರಣ ಮತ್ತು ಸುರತ್ಕಲ್ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ನ ಫಾಜಿಲ್ ಮನೆಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಭೇಟಿಯಾಗಿ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು. ಜತೆಗೆ ಎರಡು ಕುಟುಂಬದ ತಲಾ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಅವರು, ರಾಜ್ಯದ ಮುಖ್ಯಮಂತ್ರಿಗಳು ಅಯೋಗ್ಯ, ನಾಲಾಯಕ್. ಇವರಿಗೆ ಮುಖ್ಯಮಂತ್ರಿಯಾಗಲು ಯೋಗ್ಯತೆ ಇಲ್ಲ. ಕೂಡಲೇ ಸರ್ಕಾರವನ್ನು ವಿಸರ್ಜಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷಪಾತ ಮಾಡುತ್ತಿದ್ದಾರೆ. ಬೆಳ್ಳಾರೆಯ ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ ಅವರು ಮಸೂದ್ ಮನೆಗೆ ಭೇಟಿ ನೀಡಿಲ್ಲ. ಅವರು 6 ಕೋಟಿ ಜನತೆಯ ಸಿಎಂ ಆಗಬೇಕಿತ್ತು. ಆದರೆ, ಅವರು ಬಿಜೆಪಿಯ ಸಿಎಂ ಆಗಿದ್ದಾರೆ. ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆಪಾದಿಸಿದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ.. ಕುಟುಂಬಕ್ಕೆ ರೂ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರ