ಉಳ್ಳಾಲ/ಮಂಗಳೂರು: ರಾಜ್ಯದ ಏಳು ಜಿಲ್ಲೆಗಳಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣ ರೂ. 5 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಕಡಲ್ಕೊರೆತಕ್ಕೀಡಾದ ಉಳ್ಳಾಲ ತಾಲೂಕಿನ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಹಾಗೂ ಮೊಗವೀರಪಟ್ನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಹಾಗೂ ಮೀನುಗಾರಿಕಾ ಸಚಿವರ ಜೊತೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ವಿಪರೀತವಾಗಿದ್ದು, ತಡೆಗೋಡೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ವಿಪತ್ತು ನಿರ್ವಹಣೆಯ ರಾಜ್ಯ ಉಪಾಧ್ಯಕ್ಷನಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಶೀಘ್ರವೇ ತರುತ್ತೇನೆ. ತಜ್ಞರ ತಂಡದ ಜೊತೆಗೆ ಸಮೀಕ್ಷೆ ನಡೆಸಿ ಕಡಲ್ಕೊರೆತ ತಡೆಗೆ ಪ್ರಯತ್ನಪಡುತ್ತೇವೆ ಎಂದರು.
ಬೆಂಗಳೂರಿಗೆ ತೆರಳಿದ ತಕ್ಷಣ ಪರಿಹಾರ ನೀಡುವ ಆದೇಶಕ್ಕೆ ಸಹಿ ಹಾಕುತ್ತೇನೆ. ಈ ಹಿಂದೆ ಎನ್ಡಿಆರ್ಎಫ್ ಅಡಿ 95,000 ರೂ. ಮಾತ್ರ ನೀಡುವ ಕಾನೂನಿತ್ತು. ಸದ್ಯ ಮುಖ್ಯಮಂತ್ರಿಗಳ ಜತೆಗೆ ಮಾತನಾಡಿ ಅದನ್ನು ರೂ. 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮನೆಗಳಿಗೆ ನೀರು ನುಗ್ಗಿದರೆ ಕೊಡುತ್ತಿದ್ದ ರೂ.3,500 ರೂ.ಗಳನ್ನು ರೂ.10,000ಕ್ಕೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ, ಮರವಂತೆ ಶೈಲಿಯಲ್ಲೇ ಕಡಲ್ಕೊರೆತ ತಡೆಬೇಲಿಯನ್ನು ರಚಿಸುವ ಯೋಜನೆ ರೂಪಿಸುತ್ತೇವೆ. ಪ್ರಾಥಮಿಕವಾಗಿ ತಜ್ಞರ ವರದಿ ಪಡೆದ ಬಳಿಕವಷ್ಟೇ ತೀರ್ಮಾನಕ್ಕೆ ಬರುತ್ತೇವೆ. ರೆಸಾರ್ಟ್ಗಳಿಗೆ ಸರ್ಕಾರ ಆದ್ಯತೆ ಕೊಡುವುದಿಲ್ಲ. ತುರ್ತು ಪರಿಹಾರ ಮತ್ತು ಶಾಶ್ವತ ಪರಿಹಾರದ ಕುರಿತು ಕಂದಾಯ ಸಚಿವರ ನೇತೃತ್ವದಲ್ಲಿ ಜಿಲ್ಲಾಡಳಿತದ ಜೊತೆಗೆ ಸಭೆ ನಡೆಸಲಾಗುವುದು. ನಡೆಸಿದ ಚರ್ಚೆಗಳ ವಿವರವನ್ನು ಜು.10 ರಂದು ಎರಡು ಜಿಲ್ಲೆಯ ಸಚಿವರು ಸೇರಿ ಮುಖ್ಯಮಂತ್ರಿಗೆ ಸಲ್ಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ತೀರ್ಮಾನಿಸಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಪೊಲೀಸ್ ಕಮಿಷನರ್ ಶಶಿಕುಮಾರ್, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ನಿಗಮ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮುಂದುವರಿದ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸತತವಾಗಿ ಆರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಿದೆ. ಶಾಲಾ ಕಾಲೇಜುಗಳಿಗೆ ಕಳೆದ ಐದು ದಿನಗಳಿಂದ ರಜೆ ನೀಡಿದ್ದು, ನಾಳೆ ಕೂಡ ರಜೆ ಇರಲಿದೆ. ತಗ್ಗುಪ್ರದೇಶಗಳಲ್ಲಿ ಹಲವೆಡೆ ಮನೆ ತೋಟಗಳು ಜಲಾವೃತವಾಗಿದೆ. ಜಿಲ್ಲೆಯ ಅಲ್ಲಲ್ಲಿ ಗುಡ್ಡಕುಸಿತ, ಮನೆ ಹಾನಿ ಪ್ರಕರಣಗಳು ವರದಿಯಾಗಿದೆ. ಇಂದು ರೆಡ್ ಅಲರ್ಟ್ ಇದ್ದು, ನಾಳೆ ಕೂಡ ರೆಡ್ ಅಲರ್ಟ್ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ನದಿಯಲ್ಲಿ ಕಾರು ಕೊಚ್ಚಿ ಹೋಗಿ ಸೇರಿ 9 ಜನ ಸಾವು, ಪವಾಡದಂತೆ ಬದುಕುಳಿದ ಮಗು