ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ಈ ಕಾರಣ ಸಂಘರ್ಷಗಳು ಕೂಡಾ ಹೆಚ್ಚುತ್ತಿದೆ. ಸರ್ಕಾರ ಕೂಡಲೇ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂದು ರಾಮ್ ಸೇನಾ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಮಂಗಳೂರಿನ ಕೊಟ್ಟಾರದಲ್ಲಿ ಇತ್ತೀಚೆಗೆ ಗೋ ಸಾಗಾಟ ಪತ್ತೆ ಹಚ್ಚಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರನ್ನು ದೂಷಿಸಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಜಾನುವಾರು ಸಾಗಾಟ ಮಾಡಿದ ಹನೀಫ್ ಮೇಲೂ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಮಾಡಿದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದರು.
ಕರ್ನಾಟಕ ರಾಮ್ ಸೇನಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕಿರಣ್ ಉರ್ವಸ್ಟೋರ್ ಮಾತನಾಡಿ, ಕೊಟ್ಟಾರದಲ್ಲಿ ಜಾನುವಾರು ಸಾಗಾಟ ಮಾಡಿದ ಹನೀಫ್, ಈ ಹಿಂದೆ ಹಲವು ಗೋಸಾಗಾಟ ಪ್ರಕರಣದಲ್ಲಿ ಕೂಡಾ ಆರೋಪಿಯಾಗಿದ್ದಾನೆ. ಈತನ ಮೇಲೆ ಪೊಲೀಸರು ತೆಗೆದುಕೊಂಡ ಕ್ರಮ ಸರಿಯಿದೆ ಎಂದು ಹೇಳಿದರು.