ಪುತ್ತೂರು: ಕ್ವಾರಂಟೈನಲ್ಲಿ ಇರುವವರಿಗೆ ಆಹಾರ ನೀಡುವವರಿಗೆ ಸ್ಥಳೀಯರು ಬೆದರಿಕೆ ಹಾಕುತ್ತಿರುವ ಘಟನೆ ತಾಲೂಕು ಆಡಳಿತದ ಗಮನಕ್ಕೆ ಬಂದಿದೆ. ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲು ಶಿಕ್ಷೆ ನೀಡಲಾಗುವುದು ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಎಚ್ಚರಿಕೆ ನೀಡಿದ್ದಾರೆ.
ಹೊರ ರಾಜ್ಯದಲ್ಲಿ ಉಳಿದಿದ್ದ ಕೂಲಿ ಕಾರ್ಮಿಕರು ಜಿಲ್ಲೆಗೆ ಮರಳಿದ ಹಿನ್ನೆಲೆ ಮುಂಜಾಗೃತ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿದೆ. ಪುತ್ತೂರು ತಾಲೂಕಿನ 121 ಸರ್ಕಾರಿ ಹಾಗೂ 13 ಖಾಸಗಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ. ನಿಗಾದಲ್ಲಿರುವವರಿಗೆ ಸ್ಥಳೀಯರು ಹಾಗೂ ಕುಟುಂಬದವರು ಊಟ ನೀಡಲು ಅವಕಾಶ ನೀಡಲಾಗಿದೆ. ಅಲ್ಲದೇ ಆಹಾರ ನೀಡುತ್ತಿರುವವರಿಗೆ ಅಡ್ಡಿ ಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಆಹಾರ ನೀಡುವವರಿಗೆ ಬೆದರಿಕೆ ಶಿಕ್ಷಾರ್ಹ
ಹೊರ ರಾಜ್ಯದಿಂದ ಬಂದ 15 ಮಂದಿಯನ್ನು ಬಲ್ನಾಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಗಾದಲ್ಲಿಡಲಾಗಿದ್ದು, ಊಟ ತಂದು ಕೊಡುವ ವ್ಯಕ್ತಿಗೆ ಸ್ಥಳೀಯ ಕೆಲ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. ಈ ರೀತಿ ಅಡ್ಡಿಪಡಿಸುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಪುತ್ತೂರು ತಾಲೂಕಿಗೆ ಹೊರ ರಾಜ್ಯಗಳಿಂದ 79 ಮಂದಿ ಬಂದಿದ್ದಾರೆ. ಇವರಲ್ಲಿನ 10 ಮಂದಿ ಮಹಿಳೆಯರಿಗೆ ಹೋಮ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಮಟ್ಟದಲ್ಲಿ ಸರ್ಕಾರಿ ಶಾಲೆಗಳು, ನಗರದಲ್ಲಿ ವಿದ್ಯಾರ್ಥಿ ನಿಲಯಗಳು ಹಾಗೂ ಲಾಡ್ಜ್ಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ಗ್ರಾಪಂ, ತಾಪಂ ವತಿಯಿಂದ ಊಟದ ವ್ಯವಸ್ಥೆ
ಪುತ್ತೂರು ತಾಲೂಕಿಗೆ ಸುಮಾರು 1000 ಮಂದಿ ಬರುವ ನಿರೀಕ್ಷೆ ಇದೆ. 3094 ಮಂದಿಗೆ ಬೇಕಾದಷ್ಟು ವ್ಯವಸ್ಥೆ ಸಿದ್ಧಗೊಳಿಸಲಾಗಿದೆ. ಸರ್ಕಾರಿ ಕ್ವಾರಂಟೈನ್‌ನಲ್ಲಿರುವವರಿಗೆ ಗ್ರಾಪಂ ವತಿಯಿಂದ, ತಾಲೂಕು ಕೇಂದ್ರಗಳಲ್ಲಿ ತಾಪಂ ವತಿಯಿಂದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದಕ್ಕಾಗಿ ತಾಪಂಗೆ ರೂ. 20 ಸಾವಿರ ಅನುದಾನವನ್ನು ಸರ್ಕಾರ ನೀಡಿದೆ ಎಂದು ಹೇಳಿದರು.
ಪುತ್ತೂರು ತಾಲೂಕಿನ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಹಾರಾಡಿಯ ಕೊಂಬೆಟ್ಟು ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರಮೇಶ್ ಬಾಬು ಕ್ವಾರಂಟೈನ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರವಿಕುಮಾರ್, ತಾಪಂ ವ್ಯವಸ್ಥಾಪಕ ಶಿವಪ್ರಕಾಶ್ ಅಡ್ಪಂಗಾಯ ಇದ್ದರು.