ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅಸಮರ್ಪಕ ಕಾಮಗಾರಿ ವಿರೋಧಿಸಿ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕರೆ ನೀಡಿದ್ದ ರಸ್ತೆ ತಡೆ ಹಾಗೂ ಪ್ರತಿಭಟನೆಗೆ 23ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಚರ್ಚ್, ಮಸೀದಿ, ದೇವಸ್ಥಾನಗಳಿಂದಲೂ ಬೆಂಬಲ ನೀಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ನಡೆಯುವ ಸ್ಧಳದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಉಪ್ಪಿನಂಗಡಿ, ಪುತ್ತೂರು, ನೆಲ್ಯಾಡಿ, ಬೆಳ್ಳಾರೆ, ಸಂಪ್ಯ ಪೊಲೀಸರಿಂದ ಬಿಗಿ ಭದ್ರತೆ ವಹಿಸಲಾಗಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖರು ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು. ಇಲ್ಲದೇ ಹೋದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಭವಿಸುವ ಪ್ರತಿಯೊಂದು ದುರಂತಗಳಿಗೂ ಹೊಣೆ, ಹೆದ್ದಾರಿ ಪ್ರಾಧಿಕಾರವೇ ಆಗಿರುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಧಳಕಾಗಮಿಸಿ ಮನವಿ ಸ್ವೀಕರಿಸಿ ಕೂಡಲೇ ಎರಡು ತಿಂಗಳುಗಳ ಒಳಗಡೆ ರಸ್ತೆ ಸರಿಪಡಿಸುವ ಭರವಸೆ ನೀಡಿದ ನಂತರ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಉಪ್ಪಿನಂಗಡಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವ ಭರವಸೆ ನೀಡಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಿಲ್ಲ.