ಬಂಟ್ವಾಳ (ದಕ್ಷಿಣ ಕನ್ನಡ): ಮುಸ್ಲಿಂ ಮದುಮಗ ಕೊರಗಜ್ಜನ ವೇಷ ಧರಿಸಿ ಹಿಂದೂ ಸಂಪ್ರದಾಯಕ್ಕೆ ಅವಮಾನ ಮಾಡಿಲಾಗಿತ್ತು ಎಂದು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಿಟ್ಲ ಇನ್ಸ್ಪೆಕ್ಟರ್ ನಾಗರಾಜ್ ಹೆಚ್ ನೇತೃತ್ವದ ತಂಡ ಎರ್ನಾಕುಲಂ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಮದುಮಗ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮ್ರಲ್ಲಾ ಭಾಷಿತ್ ಎಂಬಾತನನ್ನು ಪೊಲೀಸರು ಎರ್ನಾಕುಲಂ ಜಿಲ್ಲೆಯ ರೈಲ್ವೆ ನಿಲ್ದಾಣದಿಂದ ವಶಕ್ಕೆ ಪಡೆದುಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮದುವೆ ಸಮಾರಂಭದಲ್ಲಿ ಮದುಮಗನಿಗೆ ದೈವ ಕೊರಗಜ್ಜನ ವೇಷ ಹಾಕಿ ಕುಣಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎನ್ನುವ ಕುರಿತು ದೂರು ದಾಖಲಾಗಿತ್ತು.
ಕೊಳ್ನಾಡು ಗ್ರಾಮದ ಅಜೀಜ್ ಎಂಬುವವರ ಮಗಳ ಮದುವೆ ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ವಿವಾಹ ಮಧ್ಯಾಹ್ನ ನಡೆದಿದ್ದು, ಸಾವಿರಾರು ಜನರಿಗೆ ಔತಣ ಕೂಟವನ್ನು ಏರ್ಪಡಿಸಿದ್ದರು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದಾನೆ.
ಇದನ್ನೂ ಓದಿ: 'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ
ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದಾರೆ. ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಧರಿಸಿ, ತಲೆಗೆ ಅಡಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿತ್ತು.