ಪುತ್ತೂರು: ಕೃಷಿ ಭೂಮಿಯನ್ನು ನೋಡಲು ಬಂದ ಛಾಯಾಗ್ರಾಹಕನೊಬ್ಬರನ್ನು ಸಂಬಂಧಿಕರೇ ಕೊಲೆ ಮಾಡಿ ಕಾಡಿನ ಮಧ್ಯೆ ಹೂತು ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್ (58) ಕೊಲೆಯಾದ ಫೋಟೋಗ್ರಾಫರ್. ಬಾಲಕೃಷ್ಣ ರೈ, ಅವರ ಪತ್ನಿ ಜಯಲಕ್ಷ್ಮಿ, ಮಗ ಪ್ರಶಾಂತ್ ರೈ ಹಾಗೂ ಜೀವನ್ ಪ್ರಸಾದ್ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:
ನ.17 ರಂದು ಪುತ್ತೂರಿನ ಕುಂಜೂರುಪಂಜ ಎಂಬಲ್ಲಿರುವ ತನ್ನ ಕೃಷಿ ಭೂಮಿಯನ್ನು ನೋಡಲು ಜಗದೀಶ್ ಮೈಸೂರಿನಿಂದ ಬಂದಿದ್ದರು. ಈ ಕೃಷಿ ಭೂಮಿಯನ್ನು ಮುಗುಳಿ ನಿವಾಸಿ ವಿಲಿಯರ್ಸ್ ಸುಬ್ಬಯ್ಯ ಅಲಿಯಾಸ್ ಬಾಲಕೃಷ್ಣ ರೈ ಎಂಬವರ ಜತೆ ಸೇರಿ ಸುಮಾರು ಎರಡೂವರೆ ಎಕರೆ ಜಾಗ ಖರೀದಿಸಿದ್ದರು. ಈ ಜಾಗದ ಖರೀದಿಯ ಬಳಿಕ ಜಾಗವನ್ನು ನೋಂದಣಿ ಮಾಡಲು ಜಗದೀಶ್ ಸಂಬಂಧಿ ಬಾಲಕೃಷ್ಣ ರೈ ಹಿಂದೇಟು ಹಾಕಿದ್ದರು.
ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿ ಜಮೀನನ್ನು ಖರೀದಿಸಿರುವ ಜಗದೀಶ್ ಆ ಜಾಗದಲ್ಲಿ ಮನೆ ನಿರ್ಮಿಸಿ ಪುತ್ತೂರಿನಲ್ಲಿ ನೆಲೆಸಲು ತೀರ್ಮಾನಿಸಿದ್ದರು. ಈ ನಡುವೆ ಈ ಜಾಗವನ್ನು ಜಗದೀಶ್ ರೈ ಅವರ ಗಮನಕ್ಕೆ ತಾರದೆ ಬಾಲಕೃಷ್ಣ ರೈ ತಮ್ಮ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಲು ತೀರ್ಮಾನಿಸಿದ್ದರು.
ನ.17 ರಂದು ಪುತ್ತೂರಿಗೆ ಬಂದಿದ್ದ ಜಗದೀಶ್:
ಈ ವಿಚಾರದ ಬಗ್ಗೆ ಮಾತುಕತೆ ನಡೆಸಲು ಜಗದೀಶ್ ನ.17 ರಂದು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದರು. ಪುತ್ತೂರಿಗೆ ಬಂದ ಬಳಿಕ ಜಗದೀಶ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಅನುಮಾನಗೊಂಡ ಜಗದೀಶ್ ಮನೆಯವರು ಈ ಸಂಬಂಧ ಮೈಸೂರಿನಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಈ ನಡುವೆ ಜಗದೀಶ್ ನಾಪತ್ತೆಯ ವಿಚಾರವಾಗಿ ಪೊಲೀಸರು ಬಾಲಕೃಷ್ಣ ರೈ ಅವರನ್ನು ಸಂಪರ್ಕಿಸಿದಾಗ ಆರೋಪಿ ಬಾಲಕೃಷ್ಣ ರೈ ಪೊಲೀಸರಿಗೆ ಜಗದೀಶ್ ನ. 18 ರಂದೇ ಮೈಸೂರಿಗೆ ವಾಪಸ್ ಹೋಗಿದ್ದಾರೆ, ಹಾಗೂ ಅವರನ್ನು ಮಾರುತಿ ಒಮ್ನಿ ಕಾರಿನಲ್ಲಿ ತಾನೇ ಸುಳ್ಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಜಗದೀಶ್ ಪತ್ತೆಗಾಗಿ ಶೋಧ ನಡೆಸಿದ್ದರು.
ಈ ನಡುವೆ ಆರೋಪಿ ಬಾಲಕೃಷ್ಣ ರೈ ನೀಡಿದ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರಿಗೆ ಆರೋಪಿ ಜಗದೀಶ್ ಅವರನ್ನು ಮಾರುತಿ ಒಮ್ನಿ ಕಾರಿನಲ್ಲಿ ಸುಳ್ಯಕ್ಕೆ ಕಳುಹಿಸಿದ ಕುರಿತ ಯಾವುದೇ ಕುರುಹು ದೊರೆತಿಲ್ಲ. ಪುತ್ತೂರಿನ ಕಾವು ಎಂಬಲ್ಲಿ ಕಾರು ನಿಲ್ಲಿಸಿ ಸುಳ್ಯಕ್ಕೆ ಕಳುಹಿಸಿರುವುದಾಗಿ ಹೇಳಿಕೆ ನೀಡಿರುವುದನ್ನು ಪರಿಶೀಲಿಸಿದ ಸ್ಥಳೀಯ ಪೊಲೀಸರು ಕಾವಿನ ಮಸೀದಿಯೊಂದರ ಸಿಸಿ ಕ್ಯಾಮೆರಾ ಪರಿಶೀಲಿಸಿದ ಸಂದರ್ಭದಲ್ಲಿ ಆರೋಪಿ ಹೇಳಿದ ಸಮಯದಲ್ಲಿ ಇಂತಹ ಯಾವುದೇ ಘಟನೆ ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ಅನುಮಾನದ ಹಿನ್ನೆಲೆಯಲ್ಲಿ ಆರೋಪಿ ಬಾಲಕೃಷ್ಣ ರೈ ಯನ್ನು ಸೂಕ್ತ ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ಮಗ ಹಾಗೂ ಇನ್ನೊಬ್ಬ ಯುವಕನ ಜತೆ ಸೇರಿಕೊಂಡು ಜಗದೀಶ್ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕೃಷ್ಣ ರೈ, ಆತನ ಮಗ ಪ್ರಶಾಂತ್ ರೈ ಹಾಗೂ ಜೀವನ್ ಗೌಡ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಶಂಕೆ:
ಆರೋಪಿಗಳು ಸುತ್ತಿಗೆಯಿಂದ ಜಗದೀಶ್ ತಲೆಗೆ ಹೊಡೆದು ಕೊಲೆ ನಡೆಸಿರುವ ಸಾಧ್ಯತೆಯಿದ್ದು, ಈ ಸಂಬಂಧ ಪೊಲೀಸರು ಕೊಲೆಗೆ ಬಳಸಿದ ಮಾರಕಾಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ಜಗದೀಶ್ ಶವವನ್ನು ಮುಗುಳಿ ರಕ್ಷಿತಾರಣ್ಯದಲ್ಲಿ ಮಣ್ಣಿನಲ್ಲಿ ಹೂತಿದ್ದು, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ರಾತ್ರೋರಾತ್ರಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಜಗದೀಶ್ ಅವರನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಕೊಲೆಯ ಬಗ್ಗೆ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಜಗದೀಶ್ ಅವರ ಮೊಬೈಲ್ ಫೋನ್ನ್ನು ನ.18ರಂದು ಜಗದೀಶ್ ಮನೆಯ ಪಕ್ಕದಲ್ಲೇ ಎಸೆದು ಹೋಗಿದ್ದರು. ಪೊಲೀಸರು ಮೊಬೈಲ್ ಲೊಕೇಷನ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಗದೀಶ್ ಮೊಬೈಲ್ ಮೈಸೂರಿನಲ್ಲಯೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಆರೋಪಿಗಳ ಬಗ್ಗೆ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸಂದೇಹ ಬಂದಿರಲಿಲ್ಲ.
ಪ್ರಮುಖ ಆರೋಪಿಯಾಗಿರುವ ಬಾಲಕೃಷ್ಣ ರೈ ಕೊಲೆಯಾದ ಜಗದೀಶ್ ಅವರ ದೂರದ ಸಂಬಂಧಿಯಾಗಿದ್ದು, ಜಗದೀಶ್ ಅವರಿಂದ ನಿರಂತರ ಹಣ ಪಡೆದುಕೊಂಡು ವಂಚಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಆರೋಪಿ ಬಾಲಕೃಷ್ಣ ರೈ ಈ ಹಿಂದೆ ಊರಿನ ಕೃಷಿ ತೋಟದಿಂದ ಕೃಷಿ ಪಂಪ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದನಂತೆ. ಈ ಕಾರಣಕ್ಕಾಗಿ ಆತನಿಗೆ ಊರಿನಲ್ಲಿ ವಿಲಿಯರ್ಸ್ ಸುಬ್ಬಯ್ಯ ಎನ್ನುವ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತಂತೆ.
ಇದನ್ನೂ ಓದಿ: ಬೆಂಗಳೂರು ಬಳಿ ರಸ್ತೆ ಅಪಘಾತ.. 3 ದಿನದ ಹಿಂದೆ ಮದುವೆ, ವರ ಸಾವು, ವಧು ಸ್ಥಿತಿ ಗಂಭೀರ!