ಮಂಗಳೂರು: ಮರಣೋತ್ತರ ಪದ್ಮವಿಭೂಷಣ ಪುರಸ್ಕೃತ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನ ಮಂಗಳೂರಿನ ಬಿ ಹ್ಯೂಮನ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿಶ್ವೇಶತೀರ್ಥ ಸ್ವಾಮೀಜಿ ಪರವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಸನ್ಮಾನ ಸ್ವೀಕಾರ ಮಾಡಿದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸುವ ಸಂದರ್ಭದಲ್ಲಿ ವೈಯಕ್ತಿಕ ಬದುಕಿಗೆ ನೆರವು ನೀಡುವುದರ ಭಾಗವಾಗಿ ಮಂಗಳೂರಿನ 'ಬಿ ಹ್ಯೂಮನ್' ಸಂಸ್ಥೆ 10 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಈ ವೇಳೆ ವೇಳೆ ಯುನಿಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಹಬೀಬ್ ರಹ್ಮಾನ್ 'ಜೀವನಪರ್ಯಂತ ಉಚಿತ ವೈದ್ಯಕೀಯ ವ್ಯವಸ್ಥೆ'ಯ ಕೊಡುಗೆಯ ದಾಖಲೆ ಪತ್ರವನ್ನು ಕೂಡ ಹರೇಕಳ ಹಾಜಬ್ಬ ಅವರಿಗೆ ನೀಡಿದರು.

ವಿಶ್ವೇಶತೀರ್ಥ ಸ್ವಾಮೀಜಿಯ ಪರವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಸನ್ಮಾನವನ್ನು ಸ್ವಿಕರಿಸಿ ಕಿತ್ತಳೆ ಹಣ್ಣು ಮಾರುತ್ತಲೇ ಶಾಲೆ ಕಟ್ಟಿದ ಹಾಜಬ್ಬರ ಬದುಕಿನ ಶೈಲಿಯನ್ನು, ಅವರ ಗುರಿಯನ್ನು ಮತ್ತು ಧ್ಯೇಯವನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿರಿ: ಕೇಂದ್ರ ಮಾಜಿ ಸಚಿವ ಆರ್ ಎಲ್ ಜಾಲಪ್ಪ ವಿಧಿವಶ... ಅಂತಿಮ ದರ್ಶನ ಪಡೆದ ಸಿಎಂ
'ಬಿ ಹ್ಯೂಮನ್' ಮಂಗಳೂರು ಘಟಕಾಧ್ಯಕ್ಷ ಮುಹಮ್ಮದ್ ಅಮೀನ್ ಎಚ್.ಎಚ್ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಡಿಸಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಹರಿರಾಮ್ ಶಂಕರ್, ಶಾಸಕ ಯು.ಟಿ ಖಾದರ್, ಎ.ಕೆ.ಎಂ ಅಶ್ರಫ್, ಬಿ.ಎಂ. ಫಾರೂಕ್, ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ರಾಯ್ ಕ್ಯಾಸ್ಟಲಿನೊ, ಸೌದಿ ಅರೇಬಿಯಾದ ಅಲ್ ಮುಝೈನ್‌ನ ಝಕರಿಯಾ ಜೋಕಟ್ಟೆ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಬಿ ಹ್ಯೂಮನ್‌ನ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್ ಮೊದಲಾದವರು ಉಪಸ್ಥಿತರಿದ್ದರು.