ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವರ್ಚಸ್ಸಿನ ಮುಂದೆ ಬೇರೆ ಯಾವ ಪಕ್ಷವೂ ಉಳಿಯಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆಯೇ ಧೂಳಿಪಟ ಆಗಿದೆ. ಆ ಪಕ್ಷ ಹಿಂದಿನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದೆ. ಇಷ್ಟು ದಿನಗಳ ಕಾಲ ಅವರು ದೇಶವನ್ನು ಕೊಳ್ಳೆ ಹೊಡೆದರು, ಭ್ರಷ್ಟಾಚಾರ ಮಾಡಿದರು. ಅಲ್ಲದೆ ಒಂದೇ ಕುಟುಂಬದವರು ರಾಜಕೀಯ ಮಾಡಿದರು. ಇದೇ ಅವರ ಅಧ್ಯಾಯ ಮುಗಿಯಲು ಕಾರಣವಾಗಿದೆ. ಈಗ ಅವರ ಸ್ಥಿತಿ ನೀರಿನಿಂದ ತೆಗೆದ ಮೀನಿನಂತೆ ಅಂತಿಮ ಚಡಪಡಿಕೆಯಿಂದ ಕೂಡಿದೆ ಎಂದರು.
ಉತ್ತರ ಪ್ರದೇಶದಲ್ಲಿ ಯೋಗಿಯವರು ಗೂಂಡಾ ರಾಜ್ಯವನ್ನು ಜನಸಾಮಾನ್ಯರ ರಾಜ್ಯವಾಗಿ ಪರಿವರ್ತನೆ ಮಾಡಿದ್ದಾರೆ. ಅಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿಯೂ ಆಗಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯದ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ಮೂರು ಸಿಎಂಗಳನ್ನು ಬದಲಾವಣೆ ಮಾಡಿದರೂ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಉಳಿದಿದೆ. ಉತ್ತರಾಖಂಡದಲ್ಲಿ ಮೂರು ಮುಖ್ಯಮಂತ್ರಿಗಳ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಈಗ ಅಲ್ಲಿನ ಫಲಿತಾಂಶ ಏನಾಗಿದೆ ಗೊತ್ತಿದೆಯಲ್ಲ ಎಂದು ಹೇಳಿದರು.
ಪಂಚರಾಜ್ಯ ಚುನಾವಣೆಯಲ್ಲಿ ನಿರೀಕ್ಷೆಯಂತೆ ಫಲಿತಾಂಶ ಬರುತ್ತಿದೆ. ಬಿಜೆಪಿ ಸರ್ಕಾರ ಮಾಡಿರುವ ಕೆಲಸ ಕಾರ್ಯದ ಆಧಾರವಾಗಿ ಜನರು ಮತ ನೀಡಿದ್ದಾರೆ. ಪಂಜಾಬ್ನಲ್ಲಿ ಬಿಜೆಪಿಗೆ ನೆಲೆ ಇಲ್ಲ. ಇಲ್ಲಿ ಅಕಾಲಿದಳ ಹಾಗೂ ಕಾಂಗ್ರೆಸ್ ಜಂಟಿಯಾಗಿ ಬಿಜೆಪಿಯ ವಿರುದ್ಧ ಗೂಬೆ ಕೂರಿಸಿದೆ. ಪಂಜಾಬ್ನಲ್ಲಿ ಬಿಜೆಪಿ ವಿಸ್ತರಣೆಯಾಗದಂತೆ ಷಡ್ಯಂತ್ರ ರೂಪಿಸಿತ್ತು. ಹೀಗಾಗಿ ಬಿಜೆಪಿಗೆ ಪಂಜಾಬ್ನಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಆದರೂ ಕಳೆದ ಬಾರಿಗಿಂತ ಪಂಜಾಬ್ನಲ್ಲಿ ಬಿಜೆಪಿ ಅಧಿಕ ಸೀಟುಗಳನ್ನು ಪಡೆದಿದೆ. ಉಳಿದ ನಾಲ್ಕು ಕಡೆ ನಿರೀಕ್ಷೆಯಂತೆ ಫಲಿತಾಂಶ ಬರುತ್ತಿದೆ. ಗೋವಾದಲ್ಲಿ ಅತಂತ್ರ ಫಲಿತಾಂಶ ಬಂದಲ್ಲಿ ಏನು ಮಾಡಬೇಕೆಂಬ ಯೋಚನೆ ಕಾಂಗ್ರೆಸ್ಗಿದೆ. ಯಾಕೆಂದರೆ ಈಗ ಅವರಿಗೆ ಎಲ್ಲಿಯೂ ಅಧಿಕಾರವಿಲ್ಲ. ಅವರು ಬೇರೆಯವರೊಂದಿಗೆ ಸೇರಿ ಗಾಳ ಹಾಕುತ್ತಿದ್ದಾರೆ. ಡಿಕೆಶಿ ಕೂಡಾ ಗೋವಾದಲ್ಲಿ ಗಾಳ ಹಾಕೋಕೆ ಹೋಗಿದ್ದಾರೆ. ಆದರೆ ಅವರ ಗಾಳ ಹಾಕುವ ಕನಸು ಯಶಸ್ವಿಯಾಗೋದಿಲ್ಲ ಎಂದರು.
ಕೇಂದ್ರ ಸರ್ಕಾರ ರೈತ ಮಸೂದೆಯನ್ನು ಹೋರಾಟಕ್ಕೆ ಮಣಿದು ಹಿಂದೆ ತೆಗೆದಿರೋದಲ್ಲ. ರೈತರಲ್ಲಿ ವಿಭಜನೆ ಆಗಬಾರದೆಂದು ಅವರ ವಿಶ್ವಾಸ ಪಡೆದು ಮಸೂದೆ ಹಿಂಪಡೆದಿದ್ದೇವೆ. ಯುಪಿಯಲ್ಲಿ ರೈತ ಹೋರಾಟದ ಜಾಗಗಳಲ್ಲಿ ಅತೀ ಹೆಚ್ಚು ಮತಗಳು ಬಿಜೆಪಿಗೆ ಬಂದಿದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.