ಬಂಟ್ವಾಳ: ಸಂಪುಟ ಪುನಾರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಇಂಥ ಸಂದರ್ಭದಲ್ಲಿ ಪಕ್ಷದ ಜನಪ್ರತಿನಿಧಿಗಳು ಬೇರಾವುದನ್ನೂ ಮಾತನಾಡದೇ ಕೋವಿಡ್ ಕುರಿತಷ್ಟೇ ಗಮನಹರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ಪ್ರಯತ್ನ ಕುರಿತು ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಅವರು, ಸಂಪುಟ ಪುನಾರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಇಂಥ ಸಂದರ್ಭ ಪಕ್ಷದ ಜನಪ್ರತಿನಿಧಿಗಳು ಬೇರಾವುದನ್ನೂ ಮಾತನಾಡದೆ ಕೋವಿಡ್ ಕುರಿತಷ್ಟೇ ಗಮನಹರಿಸಬೇಕು ಎಂದು ತಿಳಿಸಿದರು.
ಗೊಂದಲಗಳನ್ನು ಬಿಟ್ಟು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ
ಯಾವುದೇ ರೀತಿಯ ಅಪಸ್ವರ ಬಾರಂದಂತೆ ಶಾಸಕರು ಅವರವರ ಕ್ಷೇತ್ರದಲ್ಲಿ ನಿಂತುಕೊಂಡು ಕೋವಿಡ್ ನಿರ್ವಹಣೆಯನ್ನು ಮಾಡಬೇಕು. ಮೂರನೇ ಅಲೆ ಬರುವ ಹಿನ್ನೆಲೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಮಂತ್ರಿಗಳು ಅವರವರಿಗೆ ಕೊಟ್ಟ ಖಾತೆಗಳು ಹಾಗೂ ಜಿಲ್ಲೆಗಳ ಉಸ್ತುವಾರಿಯನ್ನು ಸಮಪರ್ಕವಾಗಿ ಕ್ಷೇತ್ರಗಳಲ್ಲೇ ಪೂರ್ಣಪ್ರಮಾಣವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣದ ಬಳಿಕ ಚುನಾವಣೆ ತಯಾರಿ
ಪಕ್ಷ ಮುಂಬರುವ ಚುನಾವಣೆಯನ್ನು ಎದುರಿಸುವ ಕುರಿತು ಕೋವಿಡ್ ನಂತರವಷ್ಟೇ ಗಮನಹರಿಸುತ್ತದೆ. ಜಿಪಂ ಹಾಗೂ ತಾಪಂ ಚುನಾವಣೆ ಎದುರಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಕೋವಿಡ್ ಮುಗಿದ ಮೇಲೆ, ಗ್ರಾಪಂ ಚುನಾವಣೆಯಲ್ಲಿ ಜನಸೇವಕ್ ಯಾತ್ರೆಯನ್ನು ಕೈಗೊಂಡಂತೆ ಜಿಪಂ, ತಾಪಂ ಚುನಾವಣೆಯನ್ನೂ ಎದುರಿಸುತ್ತೇವೆ. ಇದರಲ್ಲಿ ಯಶಸ್ವಿಯಾಗುವ ನಂಬಿಕೆ ನಮಗಿದೆ ಎಂದು ನಳಿನ್ ಹೇಳಿದರು.
ಬಿ. ಸಿ. ರೋಡ್ ಅಡ್ಡಹೊಳೆ ರಸ್ತೆ ಚತುಷ್ಪಥ ಕಾಮಗಾರಿ 2023ರಲ್ಲಿ ಪೂರ್ಣಗೊಳ್ಳಲಿದೆ
ಬಿ.ಸಿ. ರೋಡಿನಿಂದ ಅಡ್ಡಹೊಳೆವರೆಗಿನ ಕಾಮಗಾರಿಯನ್ನು ಎಲ್.ಎಂ.ಟಿಯವರು ಕಳೆದ ಬಾರಿ ಪ್ರಾರಂಭಿಸಿದ್ದರು. ಕಾನೂನಾತ್ಮಕ ಸಮಸ್ಯೆಯಿಂದಾಗಿ ಆ ಕಾರ್ಯ ನಿಂತಿತ್ತು. ಸದ್ಯ ರೀಟೆಂಡರ್ ಆಗಿದ್ದು, ಶಿರಾಡಿಯಿಂದ ಕೆಲಸ ಪ್ರಾರಂಭವಾಗಿದೆ. ಪೂರ್ಣ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, 2023ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆವರೆಗೆ ದ್ವಿಪಥ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಬಿ.ಸಿ.ರೋಡ್ ಜಂಕ್ಷನ್ ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟ್ ಹಾಕಲಾಗುತ್ತಿದೆ. ಅಕ್ಟೋಬರ್ ಹಂತದ ವೇಳೆಗೆ ಪುಂಜಾಲಕಟ್ಟೆವರೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಲ್ಲಿಂದ ಚಾರ್ಮಾಡಿವರೆಗಿನ ರಸ್ತೆ ಅಭಿವೃದ್ಧಿ ನಡೆಯಲಿದ್ದು, ಈ ಪ್ರಸ್ತಾಪವನ್ನು ಸರ್ಕಾರ ಅಂಗೀಕರಿಸಿದೆ ಎಂದು ನಳಿನ್ ಹೇಳಿದರು.