ಸುಳ್ಯ (ದಕ್ಷಿಣ ಕನ್ನಡ): "ನೀವು ನೂರು ಕೋಟಿ ರೂಪಾಯಿ ಕೊಟ್ಟರೂ ನಮ್ಮ ಪ್ರವೀಣನನ್ನು ವಾಪಸ್ ಕೊಡೋಕೆ ಆಗುತ್ತಾ? ನಮ್ಮ ನೋವನ್ನು ಮುಖ್ಯಮಂತ್ರಿಗಳ ಜೊತೆ ಹೇಳಲು ಹೋದರೆ, ಮಾತನಾಡಬೇಡಿ ಎಂದು ಹೇಳುತ್ತಾರೆ. ಹಾಗಾದರೆ ಮುಖ್ಯಮಂತ್ರಿ ಕೇವಲ ಮಾಧ್ಯಮಗಳಿಗೆ ಮಾತ್ರ ಹೇಳಿಕೆ ಕೊಟ್ಟು ಹೋಗುವುದೇ?" ಎಂದು ಪ್ರವೀಣ್ ನೆಟ್ಟಾರು ಅವರ ಸಂಬಂಧಿಯೋರ್ವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮ ಹೇಳಿಕೆ ನೀಡಿ ಹೊರಡುವಾಗ ಕಾರ್ಯಕರ್ತರು, ನ್ಯಾಯ ಬೇಕು, ನ್ಯಾಯ ಬೇಕು ಎಂಬ ಘೋಷಣೆ ಕೂಗಿದರು. ಈ ಸಮಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಮಾತನಾಡಲು ಮುಂದಾದ ಪ್ರವೀಣ್ ಸಂಬಂಧಿ ವಸಂತ ಪೂಜಾರಿ ಕಲ್ಲರ್ಪೆ ಎಂಬವರನ್ನು ಬಿಜೆಪಿ ನಾಯಕರು ತಡೆದಿದ್ದಾರೆ.
ಇದರಿಂದ ಆಕ್ರೋಶಗೊಂಡ ವಸಂತ ಪೂಜಾರಿ, "ಯುಪಿಯಲ್ಲಿರುವಂತಹ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸಿ, ಯಾವುದೇ ಸಂಘಟನೆಯವರಾಗಲಿ, ಹಿಂದೂ ಅಥವಾ ಮುಸ್ಲಿಮರೇ ಆಗಿರಲಿ ಯಾರನ್ನೂ ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಕರ್ನಾಟಕದಲ್ಲಿ ಮುಂದಕ್ಕೆ ಇಂತಹ ಅಮಾಯಕರು ಸಾಯಬಾರದು. ಬೊಮ್ಮಾಯಿ ಅವರು ಈ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಲೇಬೇಕು. ರಾಜ್ಯದಲ್ಲಿ ಕಠಿಣ ಕಾನೂನು ಜಾರಿಯಾಗಲೇಬೇಕು. ಅದು ನೀವು ಪ್ರವೀಣನಿಗೆ ನೀಡುವ ಶ್ರದ್ದಾಂಜಲಿ ಎಂದು ನಾನು ಬೊಮ್ಮಾಯಿ ಅವರ ಜೊತೆ ಹೇಳಲು ಹೋದರೆ, ನನ್ನನ್ನು ಮಾತನಾಡಬೇಡಿ ಮಾತನಾಡಬೇಡಿ ಎಂದು ಹೇಳುತ್ತಾರೆ. ನಮ್ಮ ಕಷ್ಟವನ್ನು ನಾವು ಹೇಳಿಕೊಂಡರೆ ಮಾತನಾಡಬೇಡಿ ಅಂತಾರೆ" ಎಂದು ಹೇಳಿದರು.
ಇದನ್ನೂ ಓದಿ : 'ಪ್ರವೀಣ್ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರದ ಗಮನ ಸೆಳೆಯುವೆ'