ಮಂಗಳೂರು: ಮಂಗಳೂರು ಗಂಜಿಮಠದ ಮಳಲಿಯಲ್ಲಿ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಎದ್ದಿರುವುದರಿಂದ ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಳಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸೀದಿಯ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆಯಾದ ಬಳಿಕ ಈ ವಿಚಾರ ಕೋರ್ಟ್ನಲ್ಲಿದೆ. ಇಂದು ಹಿಂದೂ ಸಂಘಟನೆಗಳು ಆಯೋಜಿಸಿದ ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಮಳಲಿಯ ಮಸೀದಿ ಸುತ್ತಮುತ್ತ 500ಮೀಟರ್ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿಯಿಂದ ನಾಳೆ ಬೆಳಗ್ಗೆ 8 ಗಂಟೆವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಎಲ್ಲಾ ಸಮುದಾಯದ ಗ್ರಾಮಸ್ಥರು ಅಹಿತಕರ ಘಟನೆ ನಡೆಯದಂತೆ, ಶಾಂತಿ ಕಾಪಾಡುವ ಭರವಸೆ ನೀಡಿದ್ದಾರೆ. ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ಮಾಡಲಾಗಿದೆ. ನಿನ್ನೆ ಡಿಸಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಸೀದಿ ಆಡಳಿತ ಮಂಡಳಿ, ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಎಲ್ಲರೂ ಕಾನೂನು ರೀತ್ಯ ಸಾಕ್ಷ್ಯ ಒದಗಿಸುತ್ತೇವೆ ಎಂದಿದ್ದಾರೆ. ಮಳಲಿಯಲ್ಲಿ ಎಲ್ಲಾ ಸಮುದಾಯದವರು ಒಟ್ಟಾಗಿ ಇದ್ದಾರೆ. ಎಲ್ಲಾ ಕಡೆ ಶಾಂತಿಯುತ ವಾತವರಣ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ