ಮಂಗಳೂರು : ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) 2021-22ನೇ ಆರ್ಥಿಕ ವರ್ಷದಲ್ಲಿ 39.30 ಮಿಲಿಯ ಟನ್ ಕಾರ್ಗೋ ನಿರ್ವಹಣೆ ಮಾಡುವ ಮೂಲಕ ಕಳೆದ ಹಣಕಾಸು ವರ್ಷಕ್ಕಿಂತ ಶೇ.7.66 ಹೆಚ್ಚಿನ ಸಾಧನೆಯನ್ನು ಮಾಡಿದೆ ಎಂದು ಎನ್ಎಂಪಿಎ ಅಧ್ಯಕ್ಷ ಡಾ.ಎ.ವಿ. ರಮಣ ತಿಳಿಸಿದರು.
ಕಳೆದ ವರ್ಷ ಎನ್ಎಂಪಿಎ 36.50 ಮಿಲಿಯ ಟನ್ ಕಾರ್ಗೋ ನಿರ್ವಹಣೆ ಮಾಡಿತ್ತು. ಈ ಬಾರಿ ಹೆಚ್ಚಳ ಕಂಡಿದೆ. ಒಟ್ಟು 39.30 ಮಿಲಿಯ ಟನ್ ಕಾರ್ಗೋ ನಿರ್ವಹಣೆಯಲ್ಲಿ 28.70 ಮಿಲಿಯ ಟನ್ ಯುಪಿಸಿಎಲ್, ಎಂಆರ್‌ಪಿಎಲ್, ಕೆಐಒಸಿಎಲ್ ಮತ್ತು ಜೆಎಸ್‌ಡಬ್ಲ್ಯುದಿಂದ ನಿರ್ವಹಣೆ ಮಾಡಿದ್ದು, ಉಳಿದ 10.50 ಮಿಲಿಯ ಟನ್ ಇತರ ಸಂಸ್ಥೆಗಳ ಕಾರ್ಗೋ ನಿರ್ವಹಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ವರ್ಷ 1,52,484 ಟಿಇಯು ಕಂಟೈನರ್ ನಿರ್ವಹಣೆ, 2.99 ಲಕ್ಷ ಟನ್ ಬಿಟುಮಿನ್ ನಿರ್ವಹಣೆ, ಹೊಸ ಕಾರ್ಗೋ ಮೂಲಕ 69,500 ಮೆಟ್ರಿಕ್ ಟನ್ ಭಾರಿ ಕೈಗಾರಿಕಾ ಉಪ್ಪು ನಿರ್ವಹಣೆ, 1,13,642 ಮೆಟ್ರಿಕ್ ಟನ್ ಕಲ್ಲಿದ್ದಲು ನಿರ್ವಹಣೆ, ಕೋವಿಡ್ ಸಂದರ್ಭ 370 ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ನಿರ್ವಹಣೆ ಮಾಡಲಾಗಿದೆ ಎಂದರು.
ಸಾಗರಮಾಲಾ ಯೋಜನೆ : ನವಮಂಗಳೂರು ಬಂದರು ಪ್ರಾಧಿಕಾರದಿಂದ ಸಾಗರಮಾಲ ಯೋಜನೆಯಡಿ 7 ವರ್ಷದಲ್ಲಿ 641 ಕೋಟಿ ರೂ. ಮೊತ್ತದ ಏಳು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ದೇಶದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ 1,336 ಕೋಟಿ ರೂ. ಮೊತ್ತದ 10 ಯೋಜನೆಯನ್ನು ಮಂಜೂರು ಮಾಡಿತ್ತು. ಆ ಪೈಕಿ 7 ಯೋಜನೆ ಪೂರ್ಣಗೊಂಡಿದ್ದು, ಅದರಲ್ಲಿ ಬಂದರು ಸಂಪರ್ಕ, ಬಂದರು ಆಧುನೀಕರಣ, ಬಂದರು ಮೂಲಕ ಮತ್ತು ಕರಾವಳಿ ಕೈಗಾರಿಕೀಕರಣ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ತುರ್ತು ಸಹಾಯವಾಣಿಯಲ್ಲಿ ಲೋಪ : ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್