ಮಂಗಳೂರು: ಕೇಂದ್ರ ಸರ್ಕಾರವು ದೇಶಕ್ಕೆ ಮಾರಕವಾಗಿರುವ ರೈತ ವಿರೋಧಿ ಕಾಯ್ದೆಗಳನ್ನು ರೈತರ ಜನಾಂದೋಲನಕ್ಕೆ ಮಣಿದು ಹಿಂಪಡೆದಿದೆ. ಆದರೆ 1 ವರ್ಷ 2 ತಿಂಗಳಲ್ಲಿ ಎಷ್ಟು ಶ್ರೀಮಂತರು ಈ ಕಾಯ್ದೆಯಿಂದ ಲಾಭ ಪಡೆದುಕೊಂಡಿದ್ದಾರೆಂದು ಸರ್ಕಾರ ಬಹಿರಂಗಪಡಿಸಲಿ ಎಂದು ಶಾಸಕ ಯು.ಟಿ ಖಾದರ್ (MLA U.T.Khadar) ಹೇಳಿದರು.
'ಬಿಜೆಪಿ ಮುಖಂಡರು ಕ್ಷಮೆ ಯಾಚಿಸಲಿ':
ಕಾಂಗ್ರೆಸ್ ಸರ್ಕಾರ ರೈತ ಮಸೂದೆಯನ್ನು ಜಾರಿಗೊಳಿಸಿತ್ತು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಕಾನೂನನ್ನು ತಿದ್ದುಪಡಿ ಮಾಡಿತು. ಹಾಗಾಗಿ ರೈತರು ನಿರಂತರ 1.2 ವರ್ಷಗಳ ಕಾಲ ಪ್ರತಿಭಟನೆ ನಡೆಸಿದರು. ಇದೊಂದು ಐತಿಹಾಸಿಕವಾದ ಹೋರಾಟ. ಇತಿಹಾಸದ ಪುಟಗಳಲ್ಲಿ ಬರೆಯುವಂತಹ ಘಟನೆಯಾಗಿದೆ. ಆದ್ರೆ ಈ ಹೋರಾಟದಲ್ಲಿ ಬಹಳಷ್ಟು ರೈತರು ಮೃತಪಟ್ಟರು, ಕೆಲ ರೈತರನ್ನು ಕಾರು ಹತ್ತಿಸಿ, ಗುಂಡೇಟಿನಿಂದ ಕೊಲ್ಲಲಾಗಿದೆ. ತಕ್ಷಣ ಅವರಿಗೆ ಪರಿಹಾರ ಘೋಷಣೆ ಮಾಡಬೇಕು. ಅದೇ ರೀತಿ ರೈತರ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ಮುಖಂಡರು ರೈತರು, ದೇಶದ ಜನತೆಯ ಮುಂದೆ ಕ್ಷಮೆ ಯಾಚಿಸಲಿ ಎಂದು ಒತ್ತಾಯಿಸಿದರು.
ವಿದೇಶಿ ದಲ್ಲಾಳಿಗಳು, ಖಲಿಸ್ತಾನಿ ಬೆಂಬಲಿಗರು, ದೇಶದ್ರೋಹಿಗಳು ಎಂದು ಆರೋಪಿಸಿದರೂ ಕೂಡ ರೈತರು ಯಾವುದಕ್ಕೂ ಜಗ್ಗದೇ ಪ್ರತಿಭಟನೆ ನಡೆಸಿದರು. ಸರ್ಕಾರವನ್ನು ಮಂಡಿ ಊರುವಂತೆ ಮಾಡುವ ಶಕ್ತಿ ರೈತರಿಗೆ ಬಂದಿದೆ. ಇದುವೇ ಭಾರತ ದೇಶದ ಪ್ರಜಾಪ್ರಭುತ್ವದ ಸೌಂದರ್ಯ ಎಂದರು.
ರಾಹುಲ್ ಗಾಂಧಿ ಅವರು ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದರು. ಇದೊಂದು ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ಹಿಂದಕ್ಕೆ ಪಡೆದೇ ಪಡೆಯುತ್ತದೆ ಎಂದು ಹೇಳಿದ್ದರು. ಇದೀಗ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪಿಎಂ ಘೋಷಿಸಿದ್ದಾರೆ.
ಇದನ್ನೂ ಓದಿ: ಯಾವ ಕಾರಣಕ್ಕೆ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿದ್ದಾರೋ ಗೊತ್ತಿಲ್ಲ: ಸಚಿವ ಬಿ.ಸಿ.ಪಾಟೀಲ್
ಬಿಜೆಪಿಯು ಚುನಾವಣೆಯ ಉದ್ದೇಶದಿಂದ ಈ ಕಾನೂನನ್ನು ಹಿಂಪಡೆದಿದೆ ಎಂಬುದು ಸ್ಪಷ್ಟ. ಉತ್ತರ ಪ್ರದೇಶ, ಪಂಜಾಬ್ನಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆಂದು, ಚುನಾವಣೆಯ ಭಯದಿಂದ ಈ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ದೇಶದ ಜನತೆ ಹಾಗೂ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಖಾದರ್ ಹೇಳಿದರು.