ಪುತ್ತೂರು (ದಕ್ಷಿಣ ಕನ್ನಡ): ದ.ಕ.ಜಿಲ್ಲೆಯಲ್ಲಿ ಇದುವರೆಗೆ 6,53,000 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪುತ್ತೂರಿನ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕೋವಿಡ್ 19 ಲಸಿಕಾ ಮಹಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೆ 4,90,000 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 1,30,000 ಜನರಿಗೆ 2ನೇ ಡೋಸ್ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಶೇ. 73ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಪುತ್ತೂರು ತಾಲೂಕಿಗೆ 5 ಸಾವಿರ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಜಿಲ್ಲೆಯ 78 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು, 4 ತಾಲೂಕು ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, 3 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 99 ಸೆಂಟರ್‌ಗಳಲ್ಲಿ ಏಕಕಾಲದಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 18 ಲಕ್ಷ ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ ಎಂದರು.
ಅನ್‌ಲಾಕ್ ಮಾರ್ಗದರ್ಶಿ ಸೂತ್ರಗಳನ್ನು ಸಾಕಷ್ಟು ಎಚ್ಚರವಹಿಸಿಯೇ ರಚಿಸಲಾಗಿದೆ. ಈ ವಿಚಾರದಲ್ಲಿ ಜನ ಗೊಂದಲಕ್ಕೀಡಾಗಬಾರದು. ಮೊದಲ ಹಂತದಲ್ಲೇ ಎಲ್ಲ ಮಳಿಗೆಗಳನ್ನು ತೆರೆದರೆ, ಕೊರೊನಾ ನಿಯಂತ್ರಣದ ಉದ್ದೇಶ ದಿಕ್ಕು ತಪ್ಪಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರಂಭದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಇತ್ತು. ನಂತರ ದಿನವೊಂದಕ್ಕೆ 14 ಸಾವಿರಕ್ಕೇರಿದೆ. ಭಾನುವಾರ 10 ಸಾವಿರ ಮಂದಿಯ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 500ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿದೆ ಎಂದರು.
ಪುತ್ತೂರಿನ ಘನ ತ್ಯಾಜ್ಯ ಘಟಕ ಯೋಜನೆ ರಾಜ್ಯದಲ್ಲೇ ಮಾದರಿ
ಪುತ್ತೂರಿನ ರೋಟರಿ ಸಂಸ್ಥೆಯು ನಗರಸಭಾ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ್ ಕಲ್ಪನೆಗೆ ಸಾಕಾರ ರೂಪ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಪುತ್ತೂರು ನಗರಸಭೆ ಮತ್ತು ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಸಹಯೋಗದಲ್ಲಿ ನಗರಸಭಾ ವ್ಯಾಪ್ತಿಯ ಬನ್ನೂರು ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಸಮಗ್ರ ಘನತ್ಯಾಜ್ಯ ಸಂಸ್ಕರಣಾ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಪುತ್ತೂರಿನ ಘನ ತ್ಯಾಜ್ಯ ಘಟಕ ಯೋಜನೆಯು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
ಘನ ತ್ಯಾಜ್ಯ ಘಟಕಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಘನ ತ್ಯಾಜ್ಯ ವಿಲೇವಾರಿ ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಎಡವಿದ್ರೆ ಸ್ಥಳೀಯಾಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಅಪವಾದ ಬರುವ ಮೊದಲು ಎಚ್ಚರಗೊಂಡು ಜಾಗೃತಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ನಗರಸಭೆಯು ಸ್ವಯಂ ಸೇವಾ ಸಂಸ್ಥೆಯ ಸಹಕಾರದಲ್ಲಿ ರಾಜ್ಯಕ್ಕೆ ಮಾದರಿಯಾದ ಯೋಜನೆ ರೂಪಿಸಿದೆ ಎಂದರು.
ಇದನ್ನೂ ಓದಿ: ಲಕ್ಷದ್ವೀಪ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಡುತ್ತಾ? ಅಧಿಕಾರಿಗಳು ಹೇಳೋದೇನು?