ಮಂಗಳೂರು: ನಗರದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೃಹತ್ ಗಾತ್ರದ ತಿಮಿಂಗಿಲ ಸಿಕ್ಕಿದ್ದು, ಮರಳಿ ಸಮುದ್ರ ಸೇರಿದೆ.
ಸಾಗರ್ ಎಂಬ ಬೋಟ್ ಆಳ ಸಮುದ್ರ ಮೀನುಗಾರಿಕೆಗೆಂದು ಕಳೆದ 10 ದಿನಗಳ ಹಿಂದೆ ತೆರಳಿತ್ತು. 3 ದಿನಗಳ ಹಿಂದೆ 50 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಮಯದಲ್ಲಿ ಈ ಮೀನು ಬಲೆಗೆ ಬಿದ್ದಿತ್ತು. ಬಲೆ ಭಾರವಿದ್ದಿದ್ದರಿಂದ ಬಹಳಷ್ಟು ಮೀನುಗಳು ಬಲೆಗೆ ಬಿದ್ದಿವೆ ಎಂದು ಅರಿತ ಮೀನುಗಾರರು ಬಲೆಯನ್ನು ಮೇಲೆತ್ತಿದಾಗ ಬೃಹತ್ ಗಾತ್ರದ ಈ ಮೀನು ಪತ್ತೆಯಾಗಿದೆ.
ಆದರೆ ಈ 'ವೇಲ್' ಮೀನು ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವ ಹಿನ್ನೆಲೆಯಲ್ಲಿ ಇದನ್ನು ಹಿಡಿಯೋದನ್ನು ನಿಷೇಧಿಸಲಾಗಿದೆ. ಹಾಗಾಗಿ ಮೀನುಗಾರರು ಬಲೆಯನ್ನು ತುಂಡರಿಸಿ ಮತ್ತೆ ಸಮುದ್ರಕ್ಕೆ ತಿಮಿಂಗಿಲವನ್ನು ಜೀವಂತವಾಗಿ ಬಿಟ್ಟಿದ್ದಾರೆ.
ಇದನ್ನೂ ಓದಿ: ತವರು ಮನೆಗೆ ಕಳುಹಿಸದ ಬೇಸರ: ಮಕ್ಕಳನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಮಹತ್ಯೆ
ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜರತ್ನ ಸನಿಲ್ ಈ ಬಗ್ಗೆ ಮಾಹಿತಿ ನೀಡಿ, 'ಸುಮಾರು 1,200 ಕೆಜಿ ತೂಕವುಳ್ಳ ಈ ಬೃಹತ್ ಮೀನನ್ನು ಸಮುದ್ರದಿಂದ ಮೇಲೆತ್ತುವಾಗ ಮೀನುಗಾರರ ಏರಿಕಂಬವೇ ತುಂಡಾಗಿದೆ. ಅಲ್ಲದೇ ಬಲೆಸಹಿತ ಬಿಟ್ಟರೂ ಮೀನು ಉಳಿಯುವುದಿಲ್ಲ. ಹಾಗಾಗಿ ಬಲೆಯನ್ನು ತುಂಡರಿಸಿ ಬಿಡಲಾಗಿದೆ. ಇದರಿಂದ ಮೀನುಗಾರರಿಗೆ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ, ಮೀನುಗಾರರು ಮೀನುಗಾರಿಕೆ ನಡೆಸಿ ದಡಕ್ಕೆ ಬಂದ ಬಳಿಕ ಈ ಸುದ್ದಿ ತಿಳಿದು ಬಂದಿದೆ ಎಂದು ಹೇಳಿದರು.