ಉಳ್ಳಾಲ: ಕಿನ್ಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನಡೆದಿದ್ದು, ಸ್ಥಳದಲ್ಲಿ ಮೂವರಿಗೆ ವೃದ್ಧಾಪ್ಯ ವೇತನ ಸೇರಿದಂತೆ ಘನತ್ಯಾಜ್ಯ ವಿಲೇವಾರಿಗೆ ಸ್ಥಳ ಗುರುತಿಸುವಿಕೆ, ರುದ್ರಭೂಮಿ ಮತ್ತು ನಿವೇಶನದ ಸ್ಥಳ ತನಿಖೆ ಹಾಗೂ ಕೆಲವು ಕಡತಗಳ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ತಾಲೂಕು ಕಚೇರಿಯೇ ಗ್ರಾಮ ವಾಸ್ತವ್ಯದ ಮೂಲಕ ಕಿನ್ಯ ಗ್ರಾಮಕ್ಕೆ ಬಂದಿದೆ. ಸ್ಥಳದಲ್ಲೇ ಬಾಕಿ ಉಳಿದಿರುವ ಕಡತಗಳು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವುದು ಮುಖ್ಯ ಉದ್ದೇಶವಾಗಿತ್ತು. ಗ್ರಾಮದಲ್ಲಿ ಅವಶ್ಯಕ ಯೋಜನೆಗಳಿಗೆ ಭೂಮಿ ನೀಡುವ ಕಾರ್ಯ ಬಾಕಿ ಉಳಿದಿದ್ದು, ಈ ವಾಸ್ತವ್ಯದಲ್ಲಿ ಸ್ಮಶಾನ, ನಿವೇಶನ, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸ್ಥಳವನ್ನು ತನಿಖೆ ನಡೆಸಿ ಜಾಗವನ್ನು ಈ ಯೋಜನೆಗಳಿಗೆ ಕಾಯ್ದಿರಿಸಲಾಗಿದೆ.
ಇದರೊಂದಿಗೆ ಪೌದಿ ಖಾತೆಗಳನ್ನು ವಾರಸುದಾರ ಹೆಸರಲ್ಲಿ ನೋಂದಾಯಿಸುವ ಕಾರ್ಯ, ಸಾಮಾಜಿಕ ಸೇವಾ ಭದ್ರತೆಯಡಿ ಇರುವ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು ಮತ್ತು ಅರ್ಜಿ ನೀಡದೆ ಇರುವವರ ಅರ್ಜಿಯನ್ನು ಸ್ವೀಕರಿಸಲಾಗಿದೆ. ಮೂವರು ಪಿಂಚಣಿದಾರರಿಗೆ ಸ್ಥಳದಲ್ಲೇ ಪಿಂಚಣಿ ಸೇವೆಯನ್ನು ನೀಡಲಾಗಿದೆ. ಇಬ್ಬರ 94 ಸಿಸಿ ಸರ್ವೇ ಹೆಸರಲ್ಲಿ ತಪ್ಪುಗಳಿದ್ದು, ಸ್ಥಳದಲ್ಲೇ ತಿದ್ದುಪಡಿ ಮಾಡುವ ಕಾರ್ಯ ಆಗಿದೆ. 9 ಜನರಿಗೆ 94 ಸಿಸಿ ಹಕ್ಕುಪತ್ರ, 32 ಪಿಂಚಣಿ ಅದೇಶಗಳನ್ನು ಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಗ್ರಿ ಗೋಲ್ಡ್ ವಂಚನೆಗೊಳಗಾದ ಸಂತ್ರಸ್ತರ ಸಭೆ ನಡೆಸಿ ಸರ್ಕಾರ ಮುಟ್ಟುಗೋಲು ಹಾಕಿರುವ ಸ್ಥಳದ ಮಾಹಿತಿ ನೀಡಲಾಯಿತು. ಮುಟ್ಟುಗೋಲು ಹಾಕಲಾಗಿರುವ ಜಾಗದ ಮುಂದಿನ ಕ್ರಮದ ಕುರಿತು ಸಭೆಯಲ್ಲಿ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಯು.ಟಿ.ಖಾದರ್, ತಹಶೀಲ್ದಾರ್ ಗ್ರಾಮ ವಾಸ್ತವ್ಯ ಒಂದು ಉತ್ತಮ ಕಾರ್ಯಕ್ರಮ ಎಂದು ಕಂದಾಯ ಮಂತ್ರಿಗಳನ್ನು ಅಭಿನಂದಿಸಿದರು. ಇಂತಹ ಗ್ರಾಮ ವಾಸ್ತವ್ಯಗಳು ಪ್ರತೀ ಗ್ರಾಮಗಳಲ್ಲಿ ನಡೆದು ಜನರ ಕುಂದು ಕೊರತೆ ಆಲಿಸಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ತಹಶೀಲ್ದಾರ್ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲಿನಿ ಪೂಜಾರಿ, ಮಾಜಿ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಸದಸ್ಯರಾದ ಬಾಗಿ, ಸೈಯದ್ ತ್ವಾಹ ತಂಗಲ್, ನಜೀರ್ ಹುಸೈನ್, ಸಂತೋಷ್ ಮೊಂತೆರೊ, ಶಾಹಿನಾ, ಫಾರುಕ್ ಕಿನ್ಯ, ಫಯಾಝ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.