ಮಂಗಳೂರು: ಸುಳ್ಳು ವದಂತಿಯನ್ನು ನಂಬಿ ತಮ್ಮ ತವರೂರಿಗೆ ತೆರಳಲೆಂದು ನಗರದ ಸೆಂಟ್ರಲ್ ರೈಲೆ ನಿಲ್ದಾಣದಲ್ಲಿ ಜಮಾಯಿಸಿದ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಪೊಲೀಸರು ಮಧ್ಯಸ್ಥಿಕೆ ವಹಿಸಿ ಮನವೊಲಿಕೆ ಮಾಡಿದ್ದಾರೆ. ಪರಿಣಾಮ ಇದೀಗ ಎಲ್ಲರೂ ಮನೆಯತ್ತ ತೆರಳಿದರು.
ಲಾಕೌಡೌನ್ ಪರಿಣಾಮ ಎಲ್ಲೂ ಹೋಗಲಾರದೆ ಮಂಗಳೂರಿನಲ್ಲಿಯೇ ಬಾಕಿ ಉಳಿದ ಸುಮಾರು 700-800 ಹೊರ ರಾಜ್ಯದ ವಲಸೆ ಕಾರ್ಮಿಕರು, ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ತಮಗೆ ತವರಿಗೆ ಮರಳುವ ವ್ಯವಸ್ಥೆ ಆಗದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಧರಣಿ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ 3 ದಿನಗಳೊಳಗೆ ಎಲ್ಲರಿಗೂ ಊರಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿಯವರೆಗೆ ಸಂಯಮದಿಂದಿರಿ ಎಂದು ಮನವಿ ಮಾಡಿದರು.
ಆದರೆ 2 ದಿನಗಳೊಳಗೆ ವ್ಯವಸ್ಥೆ ಕಲ್ಪಿಸುವಂತೆ ವಲಸೆ ಕಾರ್ಮಿಕರು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ. ಕೊನೆಗೂ ವಲಸೆ ಕಾರ್ಮಿಕರ ಮನವೊಲಿಕೆ ಮಾಡಿದ ಪೊಲೀಸರು, ಅವರನ್ನು ಮನೆಗಳತ್ತ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.