ಮಂಗಳೂರು : ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಹೆಚ್ಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ನಾಳೆಗೆ ಮುಂದೂಡಿದೆ.
ಏಪ್ರಿಲ್ 21ರಂದು ಮಂಗಳೂರು ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿಯ ನವೀಕರಣದ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆಯಾಗಿತ್ತು. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ನ್ಯಾಯಾಲಯವು ಕಾಮಗಾರಿಗೆ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 3ಕ್ಕೆ ನಿಗದಿಪಡಿಸಿತ್ತು. ಇದರ ಮಧ್ಯೆ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ವಿಶ್ವ ಹಿಂದೂ ಪರಿಷತ್ ಅರ್ಜಿಯನ್ನು ವಜಾಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಮಳಲಿ ಮಸೀದಿ ವಿವಾದ ಗ್ಯಾನವಾಪಿ ಮಾದರಿಯಲ್ಲಿ ಸರ್ವೆ ಮತ್ತು ತನಿಖಾ ಆಯೋಗ ನೇಮಕಕ್ಕೆ ವಿಹೆಚ್ಪಿ ಪರ ವಕೀಲರು ಒತ್ತಾಯಿಸಿದ್ದರು. ಮಸೀದಿ ಕಮಿಟಿ ಪರ ವಕೀಲ ಎಂ.ಪಿ. ಶೆಣೈ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ಯಾನವಾಪಿಯ ಪ್ರಕರಣವೇ ಬೇರೆ, ಇಲ್ಲಿನದ್ದೇ ಬೇರೆ.
ಗ್ಯಾನವಾಪಿಯಲ್ಲಿ ಪಬ್ಲಿಕ್ ರೆಪ್ರೆಸೆಂಟೇಟಿವ್ ಆಗಿ ಅರ್ಜಿ ಸಲ್ಲಿಕೆಯಾಗಿತ್ತು. ಮಳಲಿ ಪ್ರಕರಣದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದ್ದಾರೆ. ಮಸೀದಿ ಕಮಿಟಿಯಿಂದ ಕೋರ್ಟ್ಗೆ ಭೂಮಿಯ ದಾಖಲೆ ಸಲ್ಲಿಕೆ ಮಾಡಲಾಗಿದ್ದು, ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಮಳಲಿ ಮಸೀದಿ ವಿವಾದ : ವಿಹೆಚ್ಪಿ ಅರ್ಜಿ ವಜಾಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್