ಪುತ್ತೂರು: ಕಬಕ ಪುತ್ತೂರು ರೈಲ್ವೆ ನಿಲ್ದಾಣದ ವ್ಯಾಪ್ತಿಗೆ ಒಳಪಟ್ಟ ಜಾಗಕ್ಕೆ ಇಲಾಖೆ ಬೇಲಿ ಹಾಕಲು ಮುಂದಾಗಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ನಗರಸಭೆ ಸ್ಥಳೀಯ ಸದಸ್ಯ ಶಕ್ತಿ ಸಿನ್ಹಾ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವಾರು ಮಂದಿ ಆಗಮಿಸಿ ಬೇಲಿ ಹಾಕಲು ಬಂದವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಶಾಸಕರು, ಸಂಸದರು, ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಕಾಮಗಾರಿ ನಿಲ್ಲಿಸಿದರು.
ಈ ಕುರಿತು ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕರಾದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು, ರೈಲ್ವೆ ಇಲಾಖೆಯಿಂದ ಏಕಾಏಕಿ ಬೇಲಿ ಹಾಕುವ ಉದ್ದೇಶ ಸರಿಯಲ್ಲ. ಸುಮಾರು 150 ಕ್ಕಿಂತ ಹೆಚ್ಚು ಮನೆಗಳಿರುವ ಜಾಗದಲ್ಲಿ ಯಾವುದೇ ಸಂಪರ್ಕದ ವ್ಯವಸ್ಥೆ ಇಲ್ಲದ ರೀತಿಯಲ್ಲಿ ಬಂದ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಭಾಗದ ವೃದ್ಧರು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಗದಂತಹ ವ್ಯವಸ್ಥೆ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತಿಳಿಸಿದರೂ ಜನಪ್ರತಿನಿಧಿಗಳ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದ ಅವರು ರೈಲ್ವೆ ಇಲಾಖೆ ಬೇಲಿ ಹಾಕುವುದಕ್ಕೆ ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.