ಮಂಗಳೂರು: ನಗರದಲ್ಲಿ ಎಲ್ಲೆಡೆಯೂ ನೀರಿನ ಸಮಸ್ಯೆ ತಲೆದೋರಿರುವುದರಿಂದ ಶಾಸಕ ವೇದವ್ಯಾಸ ಕಾಮತ್ ಮತ್ತು ಡಾ. ವೈ.ಭರತ್ ಶೆಟ್ಟಿ ನಿನ್ನೆ ಸಂಜೆ ಮಾಜಿ ಕಾರ್ಪೋರೇಟರ್ಗಳೊಂದಿಗೆ ಎಎಂಆರ್ ಡ್ಯಾಂ ಮತ್ತು ತುಂಬೆ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಇಬ್ಬರೂ ಶಾಸಕರು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರೊಂದಿಗೆ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾತುಕತೆ ನಡೆಸಿದರು.
ಈ ಸಂದರ್ಭ ಶಾಸಕ ಡಾ. ವೈ.ಭರತ್ ಶೆಟ್ಟಿ ಮಾತನಾಡಿ, ಸ್ವಲ್ಪ ದಿನದಿಂದ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಜಿಲ್ಲಾಧಿಕಾರಿ ನಮಗೆ ತಿಳಿಸಿದಂತೆ ಎಎಂಆರ್ ಡ್ಯಾಂ ಇವಾಪರೇಷನ್ ತಡೆ ಹಿಡಿಯಲು ಇಂದು ರಾತ್ರಿ ತೆರೆಯಲಾಗುತ್ತದೆ. ಆ ನೀರು ತುಂಬೆ ಡ್ಯಾಂಗೆ ಬಂದ ಬಳಿಕ ಅಲ್ಲಿನ ನೀರಿನ ಏರಿಕೆಯನ್ನು ಗಣನೆಗೆ ತೆಗೆದುಕೊಂಡು ರೇಷನಿಂಗ್ ಹಾಗೂ ಶಟ್ಡೌನ್ ಕುರಿತು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ. ಮಳೆ ಜೂನ್ನಲ್ಲಿ ಬರುವುದೆಂದು ಅಂದುಕೊಂಡರೆ, ಈಗಿರುವ ತುಂಬೆ ಡ್ಯಾಂನ ನೀರನ್ನು ಎರಡು ಮೂರು ದಿನಗಳಿಗೊಂಮ್ಮೆ ರೇಷನಿಂಗ್ ಮಾಡಿದರೆ ಮೇ. 30ರವರೆಗೆ ನೀರು ಬರಬಹುದು. ಆದ್ದರಿಂದ ಯಾವುದೇ ಸಮಸ್ಯೆ ಬರದ ಕಾರಣ ಈ ರೇಷನಿಂಗ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಮ್ಮ ನಿಯೋಗ ಇಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದು, ನೀರಿಗಾಗಿ ಜನರು ಪಡುತ್ತಿರುವ ಕಷ್ಟಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಮಂಗಳೂರಿನ 25-30% ಎತ್ತರದ ಪ್ರದೇಶಗಳಲ್ಲಿ ರೇಷನಿಂಗ್ ಮಾಡಿದ ಬಳಿಕ ನೀರು ಬರುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಈಗಾಗಲೇ ಆ ಪ್ರದೇಶಗಳಿಗೆ ಮನಪಾ ಮುಖಾಂತರ 6-7 ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಟ್ಯಾಂಕರ್ಗಳನ್ನು ಆ ಪ್ರದೇಶಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲು ಡಿಸಿಯವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.