ಮಂಗಳೂರು(ದಕ್ಷಿಣಕನ್ನಡ) : ತಾಯಿಯ ಎದೆಹಾಲು ಅಮೃತಪಾನವಿದ್ದಂತೆ. ಆದ್ರೆ, ಅದೆಷ್ಟೋ ನವಜಾತ ಶಿಶುಗಳು ಈ ಅಮೃತಪಾನದಿಂದ ವಂಚಿತಗೊಳ್ಳುತ್ತಿವೆ. ಅಂತಹ ನವಜಾತ ಶಿಶುಗಳಿಗಾಗಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯು ಪ್ರಸಿದ್ಧ ಸರ್ಕಾರಿ ಹೆರಿಗೆ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಗೆ ಸುಮಾರು 7 ಜಿಲ್ಲೆಗಳಿಂದ ಹೆರಿಗೆಗಾಗಿ ಬರುತ್ತಾರೆ. ತಿಂಗಳಿಗೆ ಸರಾಸರಿ 700 ಹೆರಿಗೆಗಳು ನಡೆಯುತ್ತವೆ. ಈ ಹೆರಿಗೆಗಳಲ್ಲಿ ಅವಧಿಪೂರ್ವವಾಗಿ ಮಕ್ಕಳು ಜನಿಸಿ ಎನ್ಐಸಿಯುವಿನಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ.
ಇಂತಹ ಮಕ್ಕಳಿಗೆ ಎದೆಹಾಲು ನೀಡಿದರೆ ಆ ಮಕ್ಕಳು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನೂ ಕೆಲವು ಮಕ್ಕಳು ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡಿರುವುದು ಮತ್ತು ಎದೆಹಾಲು ಕೊರತೆಯಿಂದ ಶಿಶುಗಳಿಗೆ ಹಾಲಿನ ಕೊರತೆ ಎದುರಾಗುತ್ತದೆ. ಇದನ್ನು ತಪ್ಪಿಸಲು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಒತ್ತುವರಿ.. ಸ್ಮಶಾನದಲ್ಲಿ ಮಲಗಿ ಪ್ರತಿಭಟನೆ..
ಉದ್ದೇಶಿತ ಹ್ಯೂಮನ್ ಮಿಲ್ಕ್ ಬ್ಯಾಂಕ್ಗೆ ಸುಮಾರು 45 ಲಕ್ಷ ರೂ. ವೆಚ್ಚವಾಗಲಿದೆ. ಇದು ರೋಟರಿ ಕ್ಲಬ್ನ ಸಹಯೋಗದಲ್ಲಿ ನಡೆಯಲಿದೆ. ಆ ಪ್ರಕ್ರಿಯೆ ಆರಂಭಗೊಂಡಿದೆ.
ಮೊದಲಿಗೆ ಉಪಕರಣವನ್ನು ಬಳಸಿ ಎದೆಹಾಲು ಡೋನೆಟ್ ಮಾಡುವ ತಾಯಿಯಿಂದ ಪಂಪ್ ಮಾಡಿಸಿ ಪ್ಯಾಶ್ಚುರೈಸೇಶನ್ ಪ್ರಕ್ರಿಯೆ ಮಾಡಿ ಅದನ್ನು ಶೀತಲೀಕರಣಗೊಳಿಸಿ ಸಂಗ್ರಹಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಎದೆಹಾಲು ದಾನ ಮಾಡುವ ಬಗ್ಗೆ ಜಾಗೃತಿಯನ್ನು ಮೂಡಿಸಲು ಚಿಂತಿಸಲಾಗಿದೆ. ಈ ಯೋಜನೆ ಜಾರಿಯಾದರೆ ಎದೆ ಹಾಲಿನಿಂದ ವಂಚಿತವಾಗುವ ಶಿಶುಗಳಿಗೆ ಅಮೃತಪಾನ ಸಿಗುವಂತಾಗಲಿದೆ.