ಸುಳ್ಯ(ದಕ್ಷಿಣ ಕನ್ನಡ): ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಪದವಿ ಪೂರ್ವ ಕಾಲೇಜುಗಳನ್ನು ಬೇಡಿಕೆ ಇರುವ ಸರ್ಕಾರಿ ಪ್ರೌಢಶಾಲೆಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸಿ ಸರ್ಕಾರಿ ಪ.ಪೂ.ಕಾಲೇಜುಗಳಾಗಿ ಮೇಲ್ಧರ್ಜೇಗೇರಿಸಿ ಸರ್ಕಾರ ಆದೇಶ ಮಾಡಿದೆ.
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಪದವಿ ಪೂರ್ವ ಕಾಲೇಜು ಸೇರಿ ಜಿಲ್ಲೆಯ ಎರಡು ಕಾಲೇಜು ಸೇರಿದಂತೆ ರಾಜ್ಯದಲ್ಲಿ ಒಟ್ಟು ಏಳು ಸರ್ಕಾರಿ ಪಿಯು ಕಾಲೇಜುಗಳು ಸ್ಥಳಾಂತಗೊಳ್ಳಲಿವೆ. ಕೆಲ ವರ್ಷಗಳಿಂದ ಸತತವಾಗಿ ಶೂನ್ಯ ಹಾಗೂ ಕನಿಷ್ಠ ದಾಖಲಾತಿ ನಡೆಯುತ್ತಿದ್ದ ಸರ್ಕಾರಿ ಪ.ಪೂ. ಕಾಲೇಜುಗಳನ್ನು ಬಂದ್ ಮಾಡುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಬೇಡಿಕೆ ಇರುವ ಕಡೆಗೆ ಅಂತಹ ಕಾಲೇಜುಗಳನ್ನು ಸ್ಥಳಾಂತರಿಸಲು ಸರ್ಕಾರ ಮುಂದಾಗಿತ್ತು.
ದಾಖಲಾತಿ ಕೊರತೆ ಇರುವ ಕಡೆಗಳಲ್ಲಿ ಶೈಕ್ಷಣಿಕ ವರ್ಷ ದಾಖಲಾತಿ ನಡೆಸದಂತೆ ಸೂಚನೆ ನೀಡಲಾಗಿತ್ತು. ಅದರಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಪ.ಪೂ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ 2 ಕಾಲೇಜುಗಳು ಸ್ಥಳಾಂತರ: ದಾಖಲಾತಿ ಕೊರತೆ ಎದುರಾಗಿರುವ ಹಿನ್ನೆಲೆ ದ.ಕ ಜಿಲ್ಲೆಯ ಎರಡು ಸರ್ಕಾರಿ ಪಿಯು ಕಾಲೇಜುಗಳು ಬೇರೆಡೆಗೆ ಸ್ಥಳಾಂತರವಾಗಲಿದೆ. ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಸ.ಪ.ಪೂ ಕಾಲೇಜು, ಕೊಲಾರ ಜಿಲ್ಲೆಯ ಬಂಗಾರು ತಿರುಪತಿಗೆ ಸ್ಥಳಾಂತರವಾದರೆ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಸ.ಪ.ಪೂ.ಕಾಲೇಜು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಪಡಕೇರಿಗೆ ಸ್ಥಳಾಂತರಗೊಳ್ಳಲಿದೆ.
ಮೂಡುಬಿದಿರೆಗೆ ಪಿಯು ಕಾಲೇಜು: ಶೂನ್ಯ ದಾಖಲಾತಿ ಕೊರತೆಯಿಂದ ಸ್ಥಳಾಂತರಗೊಳ್ಳಲಿರುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರ ಸ.ಪ.ಪೂ.ಕಾಲೇಜು ದ.ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಅಳಿಯೂರು ಸರ್ಕಾರಿ ಪ್ರೌಢಶಾಲೆಗೆ ಸ್ಥಳಾಂತರಗೊಂಡು ಪ.ಪೂ.ಕಾಲೇಜಾಗಿ ಮೇಲ್ಧರ್ಜೆಗೇರಲಿದೆ.
ಉಳಿದಂತೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ತಾವರಕೇರಿ ಪ.ಪೂ ಕಾಲೇಜು ಅದೇ ಜಿಲ್ಲೆಯ ದೇವರಹಳ್ಳಿ ತಾಲೂಕಿಗೆ, ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಪ.ಪೂ.ಕಾಲೇಜು ಧಾರವಾಡ ಜಿಲ್ಲೆಯ ಅಳ್ನಾವರ್‌ಗೆ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಅನಿವಾಳ ಪ.ಪೂ.ಕಾಲೇಜು ಬೆಂಗಳೂರು ದಕ್ಷಿಣ ಗೋವಿಂದರಾಜ ನಗರಕ್ಕೆ, ರಾಮನಗರ ಜಿಲ್ಲೆಯ ಮಾಗಡಿ ಮಂಚಿನ ಬೆಲೆ ಪ.ಪೂ.ಕಾಲೇಜು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗೋಕುಳ ಗ್ರಾಮಕ್ಕೆ ಹುದ್ದೆ ಸಮೇತ ಸ್ಥಳಾಂತಗೊಳ್ಳಲಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಉಪನ್ಯಾಸಕರಿಗೆ ಸಮಸ್ಯೆ ಎದುರಾಗುತ್ತಾ?: ಶೂನ್ಯ ಮತ್ತು ಕಡಿಮೆ ದಾಖಲಾತಿ ಹೊಂದಿರುವ ಹಿನ್ನೆಲೆ ಸ್ಥಳಾಂತರಗೊಳ್ಳುವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರು ಮತ್ತು ಸಿಬ್ಬಂದಿಯನ್ನು ಕೂಡ ಹುದ್ದೆ ಸಮೇತ ತಿಳಿಸಲಾಗುವ ಕಡೆಗೆ ಸ್ಥಳಾಂತರಿಸುವ ಆದೇಶದಿಂದ ಅಂತಹ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಉಪನ್ಯಾಸಕರು ಸಮಸ್ಯೆಗೊಳಗಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಕಾಲೇಜುಗಳು ದೂರದ ಹೊರ ಜಿಲ್ಲೆಗಳಿಗೆ ಸ್ಥಳಾಂತರವಾಗುವುದರಿಂದ ದಿಢೀರ್ ಎಂಬಂತೆ ಹುದ್ದೆಯಲ್ಲಿರುವವರು ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮುಂದೆ ಏನು?: ಸ್ಥಳಾಂತರವಾಗುವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿದ್ದಲ್ಲಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿರದ ಸ.ಪ.ಪೂ ಕಾಲೇಜಿಗೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಹಲವಾರು ವರ್ಷಗಳ ಕಾಲ ವಿದ್ಯಾರ್ಜನೆ ನೀಡಿದ ಶಿಕ್ಷಣ ಸಂಸ್ಥೆ ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರಗೊಳ್ಳುವ ಮೂಲಕ ಒಂದು ಊರಿಗೆ ಬೇಸರದ ಸಂಗತಿಯಾದರೆ ಇನ್ನೊಂದು ಊರಿಗೆ ಸಂತಸದ ವಿಚಾರವಾಗಲಿದೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕ ಜಯಣ್ಣ, ಶೂನ್ಯ ದಾಖಲಾತಿ ಹಾಗೂ ದಾಖಲಾತಿ ಕೊರತೆಯಿಂದ ರಾಜ್ಯದಲ್ಲಿ ಕೆಲವು ಸ.ಪ.ಪೂ ಕಾಲೇಜುಗಳನ್ನು ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಾಲೇಜುಗಳನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರದಿಂದ ಆದೇಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹರಿಹರ ಪಲ್ಲತ್ತಡ್ಕ ಹಾಗೂ ಪಿಲತಬೆಟ್ಟು ಪ.ಪೂ.ಕಾಲೇಜುಗಳು ಸ್ಥಳಾಂತಗೊಳ್ಳಲಿದೆ.
ಅದೇ ರೀತಿ ಮೂಡಬಿದಿರೆಯ ಅಳಿಯೂರಿಗೆ ಬೇರೆ ಜಿಲ್ಲೆಯ ಒಂದು ಕಾಲೇಜು ಬರಲಿದೆ. ಈ ಸಮಯದಲ್ಲಿ ಶಿಕ್ಷಕರ ವರ್ಗಾವಣೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈಗಾಗಲೇ ಇಂತಹ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸದಂತೆ ಸೂಚಿಸಲಾಗಿತ್ತು. ಮಕ್ಕಳನ್ನು ದಾಖಲಾತಿ ನಡೆಸಿದ್ದಲ್ಲಿ ಅವರನ್ನು ಹತ್ತಿರದ ಬೇರೆ ಕಾಲೇಜುಗಳಿಗೆ ದಾಖಲಾತಿ ಮಾಡಸಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಚಿನ್ನದ ಹೊಳಪಿನಂತೆ ಸತ್ಯ ಪುಟಿದೆದ್ದು ಬಂದಿದೆ.. ಆರೋಪ ಮಾಡಿದವರು ಕ್ಷಮೆ ಕೇಳಲಿ: ಅಮಿತ್ ಶಾ ಆಗ್ರಹ