ಮಂಗಳೂರು: ರಾಜ್ಯದ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ಮೊದಲು ಮಂಗಳೂರು ಗಲಭೆಯನ್ನು ನಡೆಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅವರನ್ನು ಜೈಲಿಗೆ ಹಾಕಲಿ. ಅಲ್ಲದೇ ಗೃಹಸಚಿವರನ್ನೂ ಪದವಿಯಿಂದ ವಜಾಗೊಳಿಸಲಿ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ನಗರಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಹೆಚ್.ಡಿ.ಕೆ. ಸುದ್ದಿಗಾರೊಂದಿಗೆ ಮಾತನಾಡಿ, ಗೋಲಿಬಾರ್ ಮಾಡಿ ಒಂದು ಹೆಣವೂ ಬಿದ್ದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾನೆ. ಮೇಲೆ ಹೊಡಿ ಎಂದು ಒಬ್ಬ ಹೇಳಿದ್ರೆ ಮತ್ತೊಬ್ಬ ಹೊಡೆದು ಬೀಳಿಸಬೇಕು ಎಂಬ ಮಾತುಗಳನ್ನು ಹೇಳುತ್ತಾರೆ. ಇಲ್ಲಿ ನಡೆಯುತ್ತಿರುವ ಗಲಭೆ ಗೃಹಸಚಿವರ ಆದೇಶದ ಮೇರೆಗೋ ಅಥವಾ ಆರ್.ಎಸ್.ಎಸ್. ಮುಖಂಡ ಪ್ರಭಾಕರ್ ಭಟ್ ಆದೇಶದ ಮೇರೆಗೋ? ಘಟನೆ ದಿನ ಪ್ರಭಾಕರ್ ಭಟ್ ಮನೆಯಲ್ಲಿ ಯಾವೆಲ್ಲಾ ಅಧಿಕಾರಿಗಳಿದ್ದರು ಎಂದು ತನಿಖೆ ಮಾಡುತ್ತೀರಾ? ಎಂದು ಕಿಡಿಕಾರಿದರು.
ಸತ್ತವರು ಸೇರಿದಂತೆ ಗುಂಡು ಹೊಡೆಸಿಕೊಂಡು ಆಸ್ಪತ್ರೆಯಲ್ಲಿ ಮಲಗಿದವರ ಮೇಲೂ ಎಫ್ಐಆರ್ ಹಾಕಲಾಗಿದೆ. ವಿರೋಧ ಪಕ್ಷದ ನಾಯಕರಿಗೆ ನಗರಕ್ಕೆ ಬರದಂತೆ ತಡೆಹಿಡಿಯಲಾಗಿದೆ. ಮಾಜಿ ಸಚಿವ ಖಾದರ್ ಹೇಳಿಕೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರ್ಎಸ್ಎಸ್ ಕಾರ್ಯಕರ್ತರೇ ಪೊಲೀಸರ ಸಮವಸ್ತ್ರ ಧರಿಸಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೋ ಎಂಬ ಅನುಮಾನ ಇದೆ ಎಂದು ಹೇಳಿದರು.
ಹತ್ತು ನಿಮಿಷದಲ್ಲಿ ಇಲ್ಲಿಗೆ ಬಂದು ಸಿಎಂ ಬಂದ ಪುಟ್ಟ ಹೋದ ಪುಟ್ಟ ಅಂಥ ಹೋದ್ರು. ಗಾಯಾಳುಗಳು, ಮೃತರ ಬಗ್ಗೆ ಕಾಳಜಿಯ ವಹಿಸಿಲ್ಲ. ಅಲ್ಲದೆ ಡಿ.18 ರಂದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಿಎಬಿ ಹಾಗೂ ಎನ್ಆರ್ ಸಿ ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ಕೋರಿದ್ದರು. ಡಿ.19ಕ್ಕೆ ಪ್ರತಿಭಟನೆ ನಡೆಸಲು ಅನುಮತಿ ದೊರಕಿದೆ. ಬಳಿಕ ಏಕಾಏಕಿ 144 ಸೆಕ್ಷನ್ ಜಾರಿಗೊಳಿಸಲಾಯಿತು. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಅಮಾಯಕರು ಪ್ರತಿಭಟನೆ ನಡೆಸಲು 19ರಂದು ಬಂದಿದ್ದಾರೆ. ಬೇರೆ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆಸಲಾಗಿದೆ. ಆದರೆ ಎಲ್ಲೂ ಯಾವುದೇ ಸಮಸ್ಯೆಗಳಾಗಿಲ್ಲ. ಮಂಗಳೂರಿನಲ್ಲಿಯೇ ಯಾಕೆ ಈ ರೀತಿ ಆಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪೊಲೀಸರು ಯಾಕೆ ಲಾಠಿಚಾರ್ಜ್ ಮಾಡಬೇಕಿತ್ತು? ಮೊನ್ನೆ ನಡೆದ ಗಲಭೆಯಲ್ಲಿ ಗಾಯಗೊಂಡಿರುವ ಮಾಜಿ ಮೇಯರ್ ಅಶ್ರಫ್ ಅವರನ್ನು ಪೊಲೀಸ್ ಕಮಿಷನರ್ ಅವರೇ ಉದ್ರಿಕ್ತರನ್ನು ಶಾಂತಿಗೊಳಿಸಲು ಕರೆಸಿದ್ದಾರೆ. ಆದರೆ ಇದಕ್ಕೆ ಸಹಕರಿಸಿದ ಅವರು ಇಂದು ಐಸಿಯುನಲ್ಲಿದ್ದಾರೆ. ಇದಕ್ಕೆ ಕಾರಣಕರ್ತರು ಯಾರು?, ಇದರ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಗುಂಡಿಗೆ ಬಲಿಯಾದವರೂ ಈ ಗಲಭೆಯಲ್ಲಿ ಪಾಲ್ಗೊಂಡವರಲ್ಲ. ಇದೊಂದು ಮಾನವೀಯ ಸರಕಾರವೇ? ಮುಖ್ಯಮಂತ್ರಿಯವರು ಪರಿಹಾರದ ಬಗ್ಗೆ ಮಾತನಾಡಿ, ಕಾನೂನು ವ್ಯಾಪ್ತಿಯಲ್ಲಿ ಯಾವ ರೀತಿ ಪರಿಹಾರ ನೀಡಬೇಕು ಅದನ್ನು ಡಿಸಿಗೆ ಹೇಳಿದ್ದೇನೆ ಎಂದಾಗ ಅವರ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಇರಲಿಲ್ಲ. ಈ ಪುರುಷಾರ್ಥಕ್ಕೆ ರಾಜ್ಯದಲ್ಲಿ ಏನೋ ಬದಲಾವಣೆ ತರುತ್ತೇನೆಂದು ಅವರು ಮುಖ್ಯಮಂತ್ರಿ ಆಗಿದ್ದಾರಾ? ಎಂದು ಕುಮಾರಸ್ವಾಮಿ ಛೇಡಿಸಿದರು.
ಶೋಭಾ ಕರಂದ್ಲಾಜೆ ಇಲ್ಲಿನ ಘಟನೆಗೆ ಕಾಂಗ್ರೆಸ್ ಕಾರಣ ಎಂದರೆ, ನಳಿನ್ ಕುಮಾರ್ ಸ್ಯಾಡಿಸ್ಟ್ ಗಳು ಎಂದಿದ್ದಾರೆ. ಸ್ಯಾಡಿಸ್ಟ್ ಗಳು ಅವರಲ್ಲ, ಸರಿಯಾಗಿ ಆಡಳಿತ ನಡೆಸದೆ, ಮನುಷ್ಯತ್ವ ಇಲ್ಲದೆ ಅನಾಗರಿಕರಾಗಿ ವರ್ತಿಸಿದ ನೀವುಗಳು ಸ್ಯಾಡಿಸ್ಟ್ ಗಳು. ರಾಜ್ಯದ ಗೃಹ ಸಚಿವರು ಎಲ್ಲಿದ್ದಾರೆ? ಪೊಲೀಸರು ಆಸ್ಪತ್ರೆಯೊಳಗೆ ನುಗ್ಗಿ ಅಶ್ರುವಾಯುಗಳನ್ನು ಸಿಡಿಸಿದ್ದಾರೆ. ಆರೇಳು ಮಂದಿ ಬುಲೆಟ್ ಏಟು ಬಿದ್ದು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಎರಡು ಮಂದಿ ಗೋಲಿ ಬಾರ್ ನಿಂದ ನಿಧನರಾದ ಹೊರತು ಆಸ್ಪತ್ರೆಯಲ್ಲಿದ್ದವರ ಬಗ್ಗೆ ಪೊಲೀಸರು ಯಾರಿಗೂ ನಿಖರವಾದ ಮಾಹಿತಿ ನೀಡಿಲ್ಲ. ಸರಕಾರಕ್ಕೆ ಮನುಷ್ಯತ್ವ ಇದ್ದರೆ, ತಪ್ಪು ಮಾಡಿದ್ದೇವೆ ಎಂಬ ಪಾಪ ಪ್ರಜ್ಞೆ ಇದ್ದರೆ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.