ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸನಿಹದಲ್ಲಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಕನ್ನಡಿಗರಿದ್ದಾರೆ. ಇಲ್ಲಿನ ಕನ್ನಡಿಗ ವಿದ್ಯಾರ್ಥಿಗಳು ಕನ್ನಡ ಶಿಕ್ಷಣಕ್ಕಾಗಿ ಮಂಗಳೂರಿನ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಆದರೆ, ಇದೀಗ ಈ ಕನ್ನಡಿಗ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಸನಿಹದಲ್ಲಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ಸಾವಿರಾರು ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಹೈಸ್ಕೂಲ್ ವಿದ್ಯಾಭ್ಯಾಸದಿಂದ ಸ್ನಾತಕೋತ್ತರ ಪದವಿವರೆಗೆ ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳು ಆಶ್ರಯಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯನ್ನು. ಆದರೆ ಕೊರೊನಾ ಬಳಿಕ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ಇದರಿಂದ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಸಂಕಷ್ಟ ಪಡುತ್ತಿದ್ದಾರೆ.
ಕಾಸರಗೋಡು ಭಾಗದ ವಿದ್ಯಾರ್ಥಿಗಳು ಮಂಗಳೂರಿಗೆ ಬರಲು ಹೆಚ್ಚಾಗಿ ರೈಲನ್ನು ಅವಲಂಬಿಸಿದ್ದರು. ಆದರೆ, ಕೊರೊನಾ ಬಳಿಕ ಪ್ಯಾಸೆಂಜರ್ ರೈಲು ಆರಂಭವಾಗಿಲ್ಲ. ರೈಲಿನಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ 50 ರೂ. ಶುಲ್ಕವಿತ್ತು. ಆದರೆ, ರೈಲು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಬಸ್ಸನ್ನು ಅವಲಂಬಿಸಬೇಕಾಗಿದೆ. ಕರ್ನಾಟಕದ ಕೆಎಸ್ಆರ್ಟಿಸಿ ಬಸ್ನಲ್ಲಿ ರಿಯಾಯಿತಿ ದರ ಇದ್ದು ಕೇರಳದ ಬಸ್ನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಇಲ್ಲ. ನಿತ್ಯ ಕರ್ನಾಟಕದ ಬಸ್ ಕಾಸರಗೋಡಿನಿಂದ ಸಂಚಾರವಿಲ್ಲ. ಇದರಿಂದಾಗಿ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ಮಂಗಳೂರಿಗೆ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳು ನಿತ್ಯ 40 ರೂ.ನಿಂದ 300 ವರೆಗೆ ಖರ್ಚು ಮಾಡುತ್ತಿದ್ದಾರೆ. ದುಬಾರಿ ಖರ್ಚು ಕಾರಣದಿಂದ ಪ್ರತಿದಿನ ಕಾಲೇಜಿಗೆ ಬರಲು ಸಂಕಷ್ಟಪಡುತ್ತಿದ್ದಾರೆ.
ಇನ್ನು ಬಸ್ ಪ್ರಯಾಣದಿಂದ ವಿದ್ಯಾರ್ಥಿಗಳು ಮೊದಲಿಗಿಂದ ಬೇಗ ಬಸ್ಗೆ ಬರಬೇಕಾಗಿರುವುದು, ಮನೆ ತಲುಪುವಾಗ ಲೇಟ್ ಆಗುತ್ತಿರುವುದು ನಡೆಯುತ್ತಿರುತ್ತದೆ. ಈ ಎಲ್ಲ ಕಾರಣದಿಂದ ಕಾಸರಗೋಡು ವಿದ್ಯಾರ್ಥಿಗಳು ಪ್ಯಾಸೆಂಜರ್ ರೈಲು ಶೀಘ್ರ ಆರಂಭವಾಗಲಿ ಎಂದು ನಿರೀಕ್ಷಿಸುತ್ತಿದ್ದಾರೆ.