ಪುತ್ತೂರು: ಪೊಲೀಸ್ ಠಾಣೆ ಜನ ಸ್ನೇಹಿ, ಮಾತೃ ಸ್ನೇಹಿ, ಬಾಲ ಸ್ನೇಹಿಯಾಗಬೇಕೆಂಬ ಸರ್ಕಾರದ ಉದ್ದೇಶ ಈಡೇರಿದೆ. ಸಂವಿಧಾನ ನಮ್ಮ ಹಕ್ಕು ಮತ್ತು ಕರ್ತವ್ಯ ನಿರ್ವಹಣೆ ಮಾಡಬೇಕಾದರೆ ಎಲ್ಲಾ ಜನರಿಗೂ ನ್ಯಾಯ ಸಿಗುವಂತಹ ಕಾನೂನು ಇರಬೇಕಾಗುತ್ತದೆ. ನೊಂದವರಿಗೆ ನ್ಯಾಯ ಒದಗಿಸುವ ಕೆಲಸ ಮಹಿಳಾ ಪೊಲೀಸ್ ಠಾಣೆಯಿಂದಲೇ ಆರಂಭವಾಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮತ್ತು ಮಹಿಳೆಯರ ಆಪ್ತ ಸಮಾಲೋಚನಾ ಆಸರೆ ಎಂಬ ಕೊಠಡಿಯಲ್ಲಿ 'ಚಿಗುರು, ಚಿಲಿಪಿಲಿ, ಮಡಿಲು' ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜನಿಲ್ಲದ ರಾಜ್ಯ, ಕಾನೂನು ಇಲ್ಲದ ನ್ಯಾಯಾಲಯ ಇರಬೇಕಾದರೆ ಶ್ರೀರಾಮನ ಉದ್ದೇಶದಂತೆ ಅಪರಾಧ ಮುಕ್ತ ಸ್ಟೇಷನ್ ಆಗಬೇಕು. ಇದಕ್ಕಾಗಿ ನಾಗರಿಕರು ಅಪರಾಧ ಮುಕ್ತ ಸಮಜದ ಬಗ್ಗೆ ಚಿಂತನೆ ಮಾಡಬೇಕು. ಸಮಾಜವನ್ನು ಒಂದು ಮಾಡಬೇಕಾದರೆ ಕುಟುಂಬ ಒಂದಾಗಬೇಕು. ಕುಟುಂಬ ಒಂದಾಗಬೇಕಾದರೆ ಅದರಲ್ಲಿನ ಸದಸ್ಯರು ಮೊದಲು ಒಂದಾಗಬೇಕು. ಮಹಿಳಾ ಪೊಲೀಸ್ ಠಾಣೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಬಂದ ದೂರುಗಳನ್ನು ತಕ್ಷಣ ದಾಖಲಿಸಿಕೊಳ್ಳದೆ, ಅದನ್ನು ಸರಿ ಮಾಡುವ ಚಿಂತನೆ ಮಾಡಬೇಕು. ಗಂಡ ಹೆಂಡತಿಯನ್ನು ಬೇರೆ ಬೇರೆ ಮಾಡುವ ಬದಲು ಒಟ್ಟು ಮಾಡುವುದು, ಕುಟುಂಬ ಒಡೆಯುವುದನ್ನು ಬಿಟ್ಟು ಸೇರಿಸುವ ಕೆಲಸ ಪೊಲೀಸ್ ಠಾಣೆಯಿಂದ ಆಗಬೇಕು. ಎಲ್ಲರಿಗೂ ರಕ್ಷಣೆ ಸಿಗುವ ಕೆಲಸ ಆಗಲಿ ಎಂದು ಹೇಳಿದರು.
ದ.ಕ.ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ಮಾತನಾಡಿ, ಪೊಲೀಸರ ಬಳಿ ಯಾರು ಬಂದರೂ ಅವರ ಸಮಸ್ಯೆಯನ್ನು ಠಾಣಾ ಇನ್‌ಚಾರ್ಜ್ ಇರುವವರು ಕೇಳುವುದು ಪ್ರಥಮ ಕರ್ತವ್ಯ. ನೊಂದ ವ್ಯಕ್ತಿಗೆ ಬೆಂಬಲವಾಗಿ ಠಾಣೆ ಕೆಲಸ ಮಾಡುತ್ತದೆ. ಅದಷ್ಟು ಕೇಸ್ ಮಾಡದೆ, ಆಪ್ತ ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಆಪ್ತಸಮಾಲೋಚನೆ ವಿಭಾಗ ತೆರೆಯಲಾಗಿದೆ. ನೊಂದು ಬಂದವರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡಬೇಕು ಎಂದರು.