ಮಂಗಳೂರು: ಪತ್ನಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಪ್ರಕರಣ ಸಾಬೀತಾಗಿರುವ ಹಿನ್ನೆಲೆ, ಪತಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 19,500 ರೂ. ದಂಡ ವಿಧಿಸಿ ಮಂಗಳೂರಿನ 3ನೇ ಸಿಜೆಎಂ (ಕಿರಿಯ ವಿಭಾಗ) ಮತ್ತು ಜೆಎಂಎಸ್ಸಿ ನ್ಯಾಯಾಲಯ ಆದೇಶ ನೀಡಿದೆ. ಮಂಗಳೂರು ನಗರದ ಶಕ್ತಿನಗರ ನಿವಾಸಿ ರಿಕ್ಷಾ ಚಾಲಕ ಶಿವಕುಮಾರ್ (45) ಶಿಕ್ಷೆಗೊಳಗಾದ ವ್ಯಕ್ತಿ.
ಪ್ರಕರಣ ಹಿನ್ನೆಲೆ:
2019ರ ಫೆಬ್ರವರಿ 20ರಂದು ರಾತ್ರಿ ಆರೋಪಿ ಶಿವಕುಮಾರ್, ಮನೆಯಲ್ಲಿ ಪತ್ನಿ ಸಾಕಮ್ಮ (39) ಮತ್ತು ಪುತ್ರಿಯೊಂದಿಗೆ ಜಗಳವಾಡಿ ನಿಂದಿಸಿದ್ದ. ಈ ಸಂದರ್ಭ ಪತ್ನಿ ಸಾಕಮ್ಮ ಮನೆಯಿಂದ ಹೊರಗೆ ಬಂದಿದ್ದು, ಶಿವಕುಮಾರ್ ಆಕೆಯ ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದನು. ಪರಿಣಾಮ ಸಾಕಮ್ಮನ ಎರಡೂ ಮೊಣಕೈ ಮತ್ತು ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಆರೋಪ ಸಾಬೀತು:
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 324, 326, 407, 506ರ ಅನ್ವಯ ಪ್ರಕರಣ ದಾಖಲಾಗಿತ್ತು. ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 3ನೇ ಸಿಜೆಎಂ (ಕಿರಿಯ ವಿಭಾಗ) ಮತ್ತು ಜೆಎಂಎಸ್ಸಿ ನ್ಯಾಯಾಲಯ, ಪ್ರಕರಣದಲ್ಲಿ 7 ಸಾಕ್ಷಿಗಳನ್ನು ವಿಚಾರಣೆ ನಡೆಸಿ 6 ದಾಖಲೆಗಳನ್ನು ಪರಿಗಣಿಸಿ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದೆ.
ಇದನ್ನೂ ಓದಿ: ಸಂಸ್ಕೃತ ವಿವಿಗೆ ರಾಜೀವ್ ಗಾಂಧಿ ಬದಲು ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಕರಂದ್ಲಾಜೆ
ಆರೋಪಿಗೆ ಐಪಿಸಿ 341ರ ಅನ್ವಯ 500 ರೂ. ದಂಡ, ಐಪಿಸಿ 324ರ ಅನ್ವಯ ಎರಡು ವರ್ಷ ಕಠಿಣ ಶಿಕ್ಷೆ ಮತ್ತು 9,000 ರೂ. ದಂಡ ಹಾಗೂ ಐಪಿಸಿ 326 ಅನ್ವಯ 3 ವರ್ಷ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ನ್ಯಾಯಾಧೀಶ ಮಧುಕರ ಭಾಗವತ್ ಆದೇಶಿಸಿದ್ದಾರೆ.
ಎರಡೂ ಸೆಕ್ಷನ್‌ಗಳಡಿ ವಿಧಿಸಲಾಗಿರುವ ಶಿಕ್ಷೆಯನ್ನು ಏಕ ಕಾಲದಲ್ಲಿ ಅನುಭವಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 19 ಸಾವಿರ ರೂ.ವನ್ನು ಸಂತ್ರಸ್ತೆ ಸಾಕಮ್ಮ ಅವರಿಗೆ ಹಾಗೂ 500 ರೂ. ಗಳನ್ನು ಸರ್ಕಾರಕ್ಕೆ ಪಾವತಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೇತ್ರಾವತಿ ವಾದಿಸಿದ್ದರು.