ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಕಳ್ಳತನ, ಅಕ್ರಮ ಗೋ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಗಂಭೀರವಾಗಿ ಕ್ರಮಕೈಗೊಂಡು ಕಡಿವಾಣ ಹಾಕದಿದ್ದಲ್ಲಿ ಬಜರಂಗದಳದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದರು.
ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಗೋ-ಕಳ್ಳತನ ಪ್ರಕರಣವನ್ನು ನಮ್ಮ ಕಾರ್ಯಕರ್ತರು ತಡೆಯುವ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಜಿಲ್ಲಾಡಳಿತವೇ ಅದಕ್ಕೆ ನೇರ ಹೊಣೆ ಎಂದು ಎಚ್ಚರಿಸಿದ ಅವರು, ಇದೊಂದು ವ್ಯವಸ್ಥಿತ ಗೋ ಮಾಫಿಯಾ. ಇದರ ಹಿಂದೆ ಕಾಣದ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು.
ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ ನಡೆಸಿರುವ ಆರೋಪಿಗಳನ್ನು ನಗರ ಪೊಲೀಸರು ನಿನ್ನೆ ಪತ್ತೆ ಹಚ್ಚಿದ್ದಾರೆ. ಯಾರು ಕೃತ್ಯದಲ್ಲಿ ತೊಡಗಿದ್ದಾರೋ ಅವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕುದ್ರೋಳಿ ಕಸಾಯಿಖಾನೆಯಲ್ಲಿ ಕುರಿ ಹಾಗೂ ಆಡುಗಳ ಜೊತೆಗೆ ಜಾನುವಾರುಗಳನ್ನು ಕಡಿಯಲಾಗ್ತಿದೆ ಎಂದು ಹೇಳಿದರು.
ಕೆಲ ಅಂಗಡಿಗಳಲ್ಲೂ ಆಡು, ಕುರಿಗಳ ಮಾಂಸದೊಂದಿಗೆ ದನ ಕರುಗಳ ಮಾಂಸ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಿದೆ. ಈ ವಿಚಾರವನ್ನು ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.