ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಅದಲ್ಲದೇ ಕೆಲವು ಕಡೆಗಳಲ್ಲಿ ಗಾಳಿಗೆ ಮರ ಬಿದ್ದು ಕೆಲವು ಮನೆಗಳಿಗೆ ಹಾನಿಯಾಗಿದೆ.
ಮಿತ್ತಬಾಗಿಲು ಹಾಗೂ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸಂಜೆಯಿಂದ ಗಾಳಿ ಮಳೆ ಸುರಿಯುತ್ತಿದೆ. ಇಂದು ಮುಂಜಾನೆ ಕುರುಬರಗುಡ್ಡೆ, ಕುಂಚಿಲ ಹಾಗೂ ಇತರ ಕೆಲವು ಕಡೆಗಳಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಕೊಲ್ಲಿ, ಬೊಳ್ಳಾಜೆ, ಪರಾರಿ, ಕುರುಬರಗುಡ್ಡೆ, ಮಾಲೂರು, ಕುಂಚಿಲ, ಕಾಡುಮನೆ ಪ್ರದೇಶಗಳಿಗೆ ಕಳೆದ 4 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಳೆ ಹಾಗೂ ಗಾಳಿಯಿಂದಾಗಿ ಮೆಸ್ಕಾಂ ಇಲಾಖಾ ಸಿಬ್ಬಂದಿಗಳಿಗೆ ಕೆಲಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆ ಹಾಗೂ ಗಾಳಿಗೆ ಜನರು ಭಯಬೀತರಾಗಿದ್ದು, ನಿದ್ದೆ ಇಲ್ಲದೇ ಮನೆಯೊಳಗೆ ಕುಳಿತುಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಾದ ವಿನಯ ಸೇನರಬೆಟ್ಟು, ವಿಜಯ ಕಾಡುಮನೆ, ಶಿವಾನಂದ ಕಿಲ್ಲೂರು ಹಾಗೂ ಇನ್ನಿತರ ಯುವಕರ ತಂಡ ಈಗಾಗಲೇ ಹಾನಿಯಾದ ಮನೆಗಳ ಮರ ತೆರವು ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಏನಾದರೂ ತೊಂದರೆಯಾದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಲು ಸಿದ್ದರಾಗಿದ್ದಾರೆ. ಕಳೆದ ನೆರೆ ಸಂದರ್ಭದಲ್ಲೂ ಈ ಯುವಕರ ತಂಡ ರಾತ್ರಿ ಹಗಲೆನ್ನದೇ ಜನರೊಂದಿಗೆ ಬೆರತು ಅವರ ನೋವಿಗೆ ಸ್ಪಂದಿಸಿದ್ದರು.

ಕಳೆದ ಆಗಸ್ಟ್ ತಿಂಗಳ ಈ ಸಮಯದಲ್ಲೆ ತಾಲೂಕಿನ ಹಲವೆಡೆ ಮಳೆಗೆ ಭಯಾನಕ ನೆರೆ ಬಂದು ಹಲವು ಮನೆಗಳು ಹಾಗೂ ಸೇತುವೆಗಳು, ಕೃಷಿ ಭೂಮಿ ನೆರೆಗೆ ಕೊಚ್ಚಿಕೊಂಡು ಹೋಗಿದ್ದವು.‘ ಅಲ್ಲದೇ ತಾಲೂಕಿನ ಹಲವು ಕಡೆಗಳಲ್ಲಿ ಸಂತ್ರಸ್ತರ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆಯುವಂತಾಗಿತ್ತು.
ಹವಾಮಾನ ಇಲಾಖೆ ಇನ್ನು ಕೆಲವು ದಿನ ಭಾರಿ ಮಳೆಯಾಲಿದೆ ಎಂಬ ಸೂಚನೆ ನೀಡಿದೆ. ಹಾಗಾಗಿ ಜನರು ಭಯಭೀತರಾಗಿದ್ದು, ಕಳೆದ ಬಾರಿಯಂತೆ ನೆರೆ ಬಾರದಿರಲಿ. ಅಂತಹ ಕಹಿ ಘಟನೆ ಮತ್ತೊಮ್ಮೆ ಮರುಕಳಿಸದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.