ಸುಳ್ಯ : ಭಾನುವಾರವಾದರೂ ಸುಳ್ಯ ತಾಲೂಕಿನ ಬೆಳ್ಳಾರೆ ಸರ್ಕಾರಿ ಆಸ್ಪತ್ರೆಯ ಬಾಗಿಲು ತೆರೆದಿದ್ದು, ವೈದ್ಯರು ಸೇರಿ ಯಾವುದೇ ಸಿಬ್ಬಂದಿ ಕಾಣದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸುಳ್ಯದ ಬೆಳ್ಳಾರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಔಷಧ ವಿತರಕರು, ರಿಷೆಪ್ಶನ್ ಸೇರಿದಂತೆ ಯಾವುದೇ ಒಬ್ಬರೂ ಸಿಬ್ಬಂದಿ ಇಲ್ಲದೇ ಇದ್ದ ಘಟನೆ ನಡೆದಿದೆ. ಔಷಧಿಗೆ ಆಗಮಿಸಿದ ಇಬ್ಬರು ಮಾತ್ರ ಆಸ್ಪತ್ರೆಯಲ್ಲಿ ಕುಳಿತುಕೊಂಡಿದ್ದು, ಬೆಳಗ್ಗೆ 9.15ಕ್ಕೆ ಆಗಮಿಸಿದ್ದು, ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಒಬ್ಬ ನೌಕರರು ಇದ್ದರು. ಈಗ ಇನ್ನೊಬ್ಬರು ಬರ್ತಾರೆ ಎಂದು ಹೇಳಿ ಅವರು ಹೋಗಿದ್ದಾರೆ.
ಆದರೆ, ನಂತರ ಯಾರೂ ಇಲ್ಲ ಎಂದು ಔಷಧಕ್ಕೆ ಆಗಮಿಸಿದವರು ಮಾತನಾಡುವುದು ವಿಡಿಯೋದಲ್ಲಿದೆ. ಅಲ್ಲದೆ ಎಲ್ಲಾ ಕೊಠಡಿಗಳ ಬಾಗಿಲು ತೆರೆದಿದ್ದರೂ ಯಾರೊಬ್ಬರೂ ವಿಡಿಯೋದಲ್ಲಿ ಕಾಣುತ್ತಿಲ್ಲ. ಯಾವ ಕಾರಣಕ್ಕಾಗಿ ಕೇಂದ್ರವನ್ನು ಪೂರ್ತಿಯಾಗಿ ಈ ಸ್ಥಿತಿಯಲಿ ಬಿಟ್ಟು ಹೊರಗೆ ತೆರಳಿದ್ದಾರೆ ಎಂದು ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 24 ಗಂಟೆ ಸೇವೆ ನೀಡಬೇಕಾದ ಆಸ್ಪತ್ರೆಯಲ್ಲಿ ಹಗಲು ಹೊತ್ತಿನಲ್ಲೇ ಯಾರೂ ಇಲ್ಲದೇ ಇರುವುದು ದುರಂತ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ತಂಗಿ ಲವರ್ ಜೊತೆ ಅಕ್ಕನ ಅನೈತಿಕ ಸಂಬಂಧ: ಅಡ್ಡಿಯಾದ ಗಂಡನ ಕೊಲೆ ಮಾಡಿದ ಹೆಂಡತಿ
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಸಿಬ್ಬಂದಿ ಆಸ್ಪತ್ರೆಯನ್ನು ತೆರೆದು, ಅದೇ ಸ್ಥಿತಿಯಲ್ಲಿ ಬಿಟ್ಟು ತೆರಳಿದ್ದಾರೆ ಎನ್ನುವ ವಿಡಿಯೋ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಿಂದ ಸ್ಪಷ್ಟನೆ ಕೇಳಿದ್ದೇನೆ. ಅವರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.