ಮಂಗಳೂರು: ದ.ಕ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚು ಮಳೆಯಾಗಿತ್ತಿದ್ದು, ಸುಳ್ಯ ತಾಲೂಕಿನ ಕಂದಲಡ್ಕ, ಮಿತ್ತೂರು, ಪಂಜ, ಅರಂಬೂರು, ಪೆರೋಡಿ ಹಾಗೂ ಕಡಬ ತಾಲೂಕಿನ ಉಚ್ಚಿಲ, ಕುಲ್ಕುಂದ, ಅಲಂಕಾರ್ ಪ್ರದೇಶಗಳನ್ನು ನೆರೆಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಕಡಬ ಹಾಗು ಸುಳ್ಯದಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಸುಳ್ಯದ ಕಲ್ಮಕಾರು ಶಾಲಾರಂಗ ಮಂದಿರದ ನಿರಾಶ್ರಿತರ ಕೇಂದ್ರದಲ್ಲಿ 8 ಕುಟುಂಬದ 25 ಜನ ಹಾಗೂ ಕಡಬದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿರಾಶ್ರಿತರ ಕೇಂದ್ರದಲ್ಲಿ 6 ಕುಟುಂಬದ 18 ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿರುವುದರಿಂದ ಸಮುದ್ರವೂ ಪ್ರಕ್ಷುಬ್ಧಗೊಂಡಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳು 3.2 ರಿಂದ 3.9 ಮೀಟರ್ ಎತ್ತರದಲ್ಲಿ ಬೀಸುತ್ತಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಇನ್ನು ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿದಿರುವುದರಿಂದ ಉಜಿರೆ, ಧರ್ಮಸ್ಥಳ, ಕೊಕ್ಕಡ, ಗುಂಡ್ಯ ಮೂಲಕ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಎನ್ಡಿಆರ್ಎಫ್ನ ಎರಡು ತಂಡಗಳು ಸುಬ್ರಹ್ಮಣ್ಯ ಹಾಗೂ ಮಂಗಳೂರನಲ್ಲಿ ನಿಯೋಜನೆಗೊಂಡಿದೆ. ಅಲ್ಲದೆ ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನೇತ್ರಾವತಿ ನದಿ ಬಂಟ್ವಾಳದಲ್ಲಿ 8.5 ಮೀಟರ್ ಮಟ್ಟದಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿ ಯಲ್ಲಿ 30.0 ಮೀಟರ್, ಕುಮಾರಧಾರ ನದಿ 25.6 ಮೀಟರ್ ಮಟ್ಟದಲ್ಲಿ ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.