ಮಂಗಳೂರು: ಅಯೋಧ್ಯೆ ರೀತಿಯಲ್ಲಿ ಕಾಶಿ ಹಾಗೂ ಮಥುರೆಯ ವಿವಾದವನ್ನು ಸರಕಾರವೇ ಮುಂದೆ ನಿಂತು ಬಗೆಹರಿಸಬೇಕೆಂದು ಆಗ್ರಹಿಸಿ ಮಾರ್ಚ್ ತಿಂಗಳಲ್ಲಿ ಕರ್ನಾಟಕದಿಂದ ಕನ್ಯಾಕುಮಾರಿವರೆಗೆ 'ಚಲೋ ಹಿಂದೂ ರಾಷ್ಟ್ರ ಯಾತ್ರೆ' ನಡೆಸಲಾಗುತ್ತದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಭಾರತ ವಲಯ ಕಾರ್ಯದರ್ಶಿ ಶ್ರೀಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪನಾಥ್ ಹೇಳಿದರು.
ನಗರದ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ರಾಷ್ಟ್ರದ ನೂತನ ಸಂಸತ್ ಭವನಕ್ಕೆ 'ಹಿಂದೂ ರಾಷ್ಟ್ರ ಭವನ' ಎಂದು ಹೆಸರಿಡಲು ಒತ್ತಾಯಿಸಿ ಸಹಿ ಸಂಗ್ರಹಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಒತ್ತಾಯಿಸಿದ್ದಾರೆ. ಅದರ ಸಹಿ ಸಂಗ್ರಹ ಅಭಿಯಾನಕ್ಕೆ ನಾಳೆ ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಪ್ರಮುಖರ ಸಭೆಯಲ್ಲಿ ಚಾಲನೆ ದೊರಕಲಿದೆ ಎಂದು ತಿಳಿಸಿದರು.
ಭಗವಾನ್ ಅವರಿಕೆ ಮಸಿ ಬಳಿದಿರುವುದನ್ನು ಅಭಿನಂದಿಸುತ್ತೇವೆ
ಭಗವಾನ್ ಅವರಿಗೆ ಮಸಿ ಬಳಿದಿರುವ ವಕೀಲೆ ಮೀರಾ ರಾಘವೇಂದ್ರ ಅವರನ್ನು ಅಖಿಲ ಭಾರತ ಹಿಂದೂ ಮಹಾಸಭಾ ಅಭಿನಂದಿಸುತ್ತದೆ. ಅವರಿಗೆ ನಾವು ಬೆಂಬಲವನ್ನು ಘೋಷಣೆ ಮಾಡುತ್ತೇವೆ. ಅಲ್ಲದೆ ಅವರ ಮೇಲೆ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸರಕಾರ ಆದೇಶ ನೀಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಸೀದಿಯಲ್ಲಿ ಮೈಕ್ ಬಳಕೆ ನಿಲ್ಲಿಸಿ
ಎಲ್ಲಾ ಮಸೀದಿಗಳಲ್ಲಿ ಅಳವಡಿಸಿರುವ ಮೈಕ್ಗಳನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ಈಗಾಗಲೇ ಕೇರಳ ಸರಕಾರಕ್ಕೆ ಮನವಿ ನೀಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಇದೇ ಆದೇಶವನ್ನು ಪಾಲಿಸಬೇಕೆಂದು ಅವರು ಆಗ್ರಹಿಸಿದರು.
ಬಿಲ್ಲವ ಸಮುದಾಯದ ಕುರಿತು ಅವಹೇಳಕಾರಿ ಹೇಳಿಕೆ ಸಲ್ಲದು
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಎಲ್.ಕೆ. ಸುವರ್ಣ ಮಾತನಾಡಿ, ಇತ್ತೀಚೆಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯವರು ಬಿಲ್ಲವ ಸಮುದಾಯದ ಹಾಗೂ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದು ಬಿಲ್ಲವ ಸಮುದಾಯಕ್ಕೆ ನೋವುಂಟು ಮಾಡುವ ವಿಚಾರವಾಗಿದೆ. ಇದನ್ನು ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ತಕ್ಷಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು.