ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಂದು ಐವರು ಬಲಿಯಾಗಿದ್ದು ಸಾವಿನ ಸಂಖ್ಯೆ 46ಕ್ಕೆ ಏರಿದೆ.
ಮೃತ ಸೋಂಕಿತರಲ್ಲಿ ಮೂವರು ಗಂಡಸರು ಹಾಗೂ ಇಬ್ಬರು ಮಹಿಳೆಯರಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಿಲಿಚಾಮುಂಡಿಕಲ್ಲುವಿನ 60 ವರ್ಷದ ವೃದ್ಧ ಶ್ವಾಸಕೋಶದಿಂದ ಬಳಲುತ್ತಿದ್ದು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಮೂಲಡ್ಕ ನಿವಾಸಿ 50 ವರ್ಷದ ವ್ಯಕ್ತಿಗೆ ಮಧುಮೇಹ ಕಾಯಿಲೆ ಇದ್ದು ವೆಂಟಿಲೇಟರ್ನಲ್ಲಿದ್ದ ಇವರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.
ಅದೇ ರೀತಿ ಮಂಗಳೂರು ತಾಲೂಕಿನ ಉರ್ವಸ್ಟೋರ್ನ 72 ವರ್ಷದ ವೃದ್ಧನೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳ್ಳಾಲ್ ಬಾಗ್ ನ 60 ವರ್ಷದ ವೃದ್ಧೆ ಮಧುಮೇಹ ಹಾಗೂ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು. ಬಂದರು ನಿವಾಸಿ 68 ವರ್ಷದ ವೃದ್ಧೆ ಶ್ವಾಸಕೋಶದಿಂದ ಬಳಲುತ್ತಿದ್ದು ಇಂದು ಸೋಂಕಿಗೆ ಬಲಿಯಾಗಿದ್ದಾರೆ.
ಇವರಲ್ಲಿ ಪುತ್ತೂರು ತಾಲೂಕಿನ ಮೂಲಡ್ಕ ನಿವಾಸಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಬೆಳ್ತಂಗಡಿಯ ವೃದ್ಧ ಅವರ ಸ್ವಗೃಹದಲ್ಲಿಯೇ ಮೃತಪಟ್ಟಿದ್ದಾರೆ. ಮಂಗಳೂರಿನ ಮೂವರೂ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.