ಮಂಗಳೂರು: ನಗರದ ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಇಂದು ಮತ್ಸ್ಯೋತ್ಸವ ಕಾರ್ಯಕ್ರಮ ನಡೆದಿದ್ದು, ಮೀನು ಖರೀದಿಗೆ ಜನರು ಮುಗಿಬಿದ್ದ ದೃಶ್ಯಗಳು ಕಂಡುಬಂದಿತು.
ಪಿಲಿಕುಳ ಲೇಕ್ ಗಾರ್ಡನ್ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹ್, ಗೆಂಡೆ, ಮುಗುಡು, ಇರ್ಪೆ ಮುಂತಾದ ಮೀನುಗಳನ್ನು ಹಿಡಿದು ಸ್ಥಳದಲ್ಲೇ ಸಾರ್ವಜನಿಕರಿಗೆ ಹರಾಜು ಮಾಡಿ ಮಾರಾಟ ಮಾಡಲಾಯಿತು. ಅಲ್ಲದೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಸಿಹಿನೀರಿನ ಮೀನುಗಳಾದ ಸಿಗಡಿ, ಕಾಣೆ, ಏಡಿ, ಬೂತಾಯಿ, ಅಂಜಲ್, ಬೊಂಡಾಸ್, ಬಂಗುಡೆ ಮುಂತಾದ ಮೀನುಗಳ ಮಾರಾಟ ಮಾಡಲಾಯಿತು. ಜೊತೆಗೆ ನಾನಾ ರೀತಿಯ ಮರಿ ಮೀನುಗಳು ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ವ್ಯವಸ್ಥೆ ಮಾಡಿದ್ದು, ಈ ಸಂದರ್ಭ ಕೆರೆಯಲ್ಲಿ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮ ಕೂಡ ನಡೆಸಲಾಯಿತು.
ಈ ಕುರಿತಂತೆ ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾತನಾಡಿ, ಪಿಲಿಕುಳ ನಿಸರ್ಗಧಾಮದ ವಿಶಾಲವಾದ ಈ ಕೃತಕ ಕೆರೆಯು ಮುಂಚೆ ಸಣ್ಣ ಕೊಳದ ರೀತಿ ಇತ್ತು. ಹಿಂದೆ ಕೆರೆಯ ಬದಿಯಲ್ಲಿ ಸುಮಾರು 150 ಮನೆಗಳಿದ್ದವು. ಆಗಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ ಆ ಮನೆಯವರನ್ನು ಬೇರೆಡೆ ಸ್ಥಳಾಂತರಿಸಿದರು. ಬಳಿಕ ಈ ಕೊಳದ ಹೂಳು ತೆಗೆದು ಸುಮಾರು ಆರು ಎಕರೆಗಳಷ್ಟು ಕೆರೆಯನ್ನು ವಿಸ್ತರಿಸಿದರು ಎಂದು ಹೇಳಿದರು.
ಮೊದಲಿಗೆ ಈ ಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಈ ಕೆರೆಯಲ್ಲಿ ಮೀನು ಸಾಕಣೆ ಮಾಡಲಾಯಿತು. ಪ್ರತಿ ವರ್ಷವೂ ಸುಮಾರು 50 ಸಾವಿರ ಮೀನು ಮರಿಗಳನ್ನು ಸಾಕಿ ಬೆಳೆಸಿ ಮರುವರ್ಷ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಇದನ್ನು ಮತ್ಸ್ಯೋತ್ಸವ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಜಯಪ್ರಕಾಶ್ ಭಂಡಾರಿ ಹೇಳಿದರು.