ಸುಳ್ಯ : ಒಂದೆಡೆ ಕಾಡಾನೆಗಳ ದಾಳಿಯಿಂದ ಕೃಷಿ ನಾಶ, ಇನ್ನೊಂದೆಡೆ ಚಿರತೆಯ ಘರ್ಜನೆ ಶಬ್ಧದಿಂದ ಸುಳ್ಯ ತಾಲೂಕಿನ ಅರಣ್ಯದಂಚಿನ ಜನರು ಭಯದಿಂದಲೇ ದಿನ ದೂಡುವಂತಾಗಿದೆ.
ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಾಪ್ಪಾಡಿ ಎಂಬಲ್ಲಿ ಕೆಲ ದಿನಗಳ ಹಿಂದೆ ಕರುವನ್ನು ಚಿರತೆ ಬೇಟೆಯಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ತಾಲೂಕಿನ ಹಲವು ಕಡೆ ಚಿರತೆ ಲಗ್ಗೆಯಿಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೆಲ ದಿನಗಳ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸಂಜೆ ವೇಳೆ ನಾಯಿಯನ್ನು ತಿರುಗಾಡಲು ಬಿಟ್ಟಿದ್ದ ಸಂದರ್ಭದಲ್ಲಿ ನಾಯಿಯನ್ನು ಚಿರತೆ ಅಟ್ಟಾಡಿಸಿದೆ. ಆ ಮನೆಯವರು ಆನೆಗಳಿಗೆ ತಂದಿದ್ದ ಸಿಡಿಮದ್ದನ್ನು ಹೊಡೆದು ಓಡಿಸಿದ್ದರು.
ಅಲ್ಲದೇ ಕೆಎಫ್‌ಡಿಸಿಯಲ್ಲಿ ಟ್ಯಾಪಿಂಗ್ ಮಾಡುವ ಕೆಲ ಕಾರ್ಮಿಕರು ಪಡ್ಡಂಬೈಲು ಎಂಬಲ್ಲಿ ಚಿರತೆಯನ್ನು ನೋಡಿದ್ದಾಗಿಯೂ, ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಕೆಎಫ್‌ಡಿಸಿ ಇಲಾಖಾ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದು ಕಡೆ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗುತ್ತಿವೆ. ಸುಳ್ಯದ ಮಂಡೆಕೋಲು ಗ್ರಾಮದ ಪೇರಾಲು ಅರಸಮಜಲು ಜಯರಾಮ ಗೌಡರ ತೋಟಕ್ಕೆ ನಿನ್ನೆ ರಾತ್ರಿ ಸುಮಾರು 2.30ರ ಸಮಯಕ್ಕೆ ಆನೆಗಳ ಹಿಂಡು ಲಗ್ಗೆಯಿಟ್ಟಿದ್ದು, 150 ಬಾಳೆ, 10-15 ಅಡಿಕೆ ಮರ ಮುರಿದು ಹಾನಿ ಮಾಡಿವೆ.
ಸುಳ್ಯ ಅರಣ್ಯ ಇಲಾಖೆಯಿಂದ ಸ್ಪಷ್ಟನೆ
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಆರ್‌ಎಫ್‌ಒ ಗಿರೀಶ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಕಾಡುಗಳಲ್ಲಿ ಹುಲಿಗಳು ಇರುವುದಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕರ್ಲಾಪ್ಪಾಡಿ ಪಡ್ಡಂಬೈಲು ಎಂಬಲ್ಲಿ ಕರುವನ್ನು ಚಿರತೆ ಹಿಡಿದಿರುವ ಕುರಿತು ಕೆಲ ದಿನಗಳ ಹಿಂದೆ ಕರೆ ಬಂದಿತ್ತು.
ಈಗಾಗಲೇ ಆ ಜಾಗದಲ್ಲಿ ಬೋನು ಇಡಲಾಗಿದೆ. ಮಾತ್ರವಲ್ಲದೇ ಆನೆ ಹಾವಳಿ ಆಗದಂತೆ ತಡೆಗೋಡೆ ನಿರ್ಮಾಣ ಕೆಲಸವೂ ಪ್ರಗತಿಯಲ್ಲಿದೆ. ಜನತೆ ಯಾವುದೇ ರೀತಿ ಆತಂಕ ಪಡಬೇಕಾದ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದಾರೆ.