ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ದ್ಯಂತ ನಿನ್ನೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಗುಡ್ಡಕುಸಿತ, ಮರ ಬಿದ್ದು ಹಾನಿ ಹಾಗೂ ಕಡಲ್ಕೊರೆತ ಸಂಭವಿಸಿವೆ.
ಭೀಕರ ಮಳೆಯ ಪರಿಣಾಮ, ನೇತ್ರಾವತಿ ಹಾಗೂ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನೇತ್ರಾವತಿ ಸ್ನಾನಘಟ್ಟಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕುಮಾರಧಾರ ನದಿಯ ನೀರಿನ ಮಟ್ಟ ಹೆಚ್ಚಳವಾಗಿ ಸ್ನಾನಘಟ್ಟ ಮುಳುಗಡೆಯಾಗಿದೆ. ಈ ಸ್ಥಳದಲ್ಲಿ ವಿಪತ್ತು ರಕ್ಷಣಾ ತಂಡ ನಿಯೋಜನೆಗೊಂಡಿದೆ. ಅಲ್ಲದೆ ಇಂದು ಬೆಳಗಿನ ಜಾವ ಸುರಿದ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಮರವೊಂದು ರಸ್ತೆಗೆ ಬಿದ್ದು, ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಇನ್ನು ಮಂಗಳೂರಿನ ಕೊಡಿಯಾಲ್ ಬೈಲ್ನ ಪಕ್ಕದಲ್ಲಿರುವ ಜೈಲ್ ರೋಡ್ ಬಳಿ ವಾಣಿಜ್ಯ ಸಂಕೀರ್ಣವೊಂದರ ಕಂಪೌಂಡ್ ಕುಸಿದು, ಪಕ್ಕದ ಎರಡು ಮನೆಗಳ ಕಂಪೌಂಡ್ಗಳಿಗೆ ಹಾನಿಯಾಗಿದೆ.
ಅಲ್ಲದೆ, ಚಿತ್ರಾಪುರ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ನೀರು ರಸ್ತೆ ಪಾಲಾಗಿದೆ. ಶಾಲೆಯೊಂದರ ಆಟದ ಮೈದಾನ ಹಾಗೂ ಸ್ಥಳೀಯ ಮನೆಗಳನ್ನು ಉಳಿಸಲು ಮರಳು ಚೀಲ ಅಳವಡಿಕೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೆ, ಕಡಲ್ಕೊರೆತ ಭೀತಿಯುಳ್ಳ ಎರಡು ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ.
ವಿಟ್ಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ. ಕೆಲವು ಕಡೆಗಳಲ್ಲಿ ಜಲಾವೃತಗೊಂಡ ಘಟನೆಯೂ ನಡೆದಿದೆ. ಕೊಳ್ನಾಡು ಗ್ರಾಮದ ರಸ್ತೆಯ ಮೇಲೆ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.
ಪುತ್ತೂರು, ಕಡಬ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರು ಸಹಾಯಕ ಆಯುಕ್ತ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆಗಸ್ಟ್ 7-8 ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ನಾಳೆ ಜಿಲ್ಲಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.