ಮಂಗಳೂರು: ಕೊರೊನಾ ಸೋಂಕಿತ ಗರ್ಭಿಣಿಗೆ ಚಿಕಿತ್ಸೆ ನೀಡಲು ವೈದ್ಯರುಗಳು ನಿರಾಕರಿಸಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದಾರೆ ಎಂದು ಆರೋಪಿಸಿ, ಸ್ವತಃ ಗರ್ಭಿಣಿ ಮಹಿಳೆಯೇ ದೂರು ದಾಖಲಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಓದಿ: ಕೋವಿಡ್ 3ನೇ ಅಲೆ ಸಿದ್ಧತೆ: ವಾರದಲ್ಲಿ ಸರ್ಕಾರಕ್ಕೆ ಕಾರ್ಯಪಡೆ ವರದಿ ಸಲ್ಲಿಕೆ
ನಗರದ ಪಾಂಡೇಶ್ವರ ಬೋಳಾರದ ಮುಳಿಹಿತ್ಲು ನಿವಾಸಿ ಖತೀಜಾ ಜಾಸ್ಮಿನ್ ದೂರು ದಾಖಲಿಸಿರುವ ಮಹಿಳೆ. ಇವರು ಕದ್ರಿ ಪೊಲೀಸ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆಯು ಡಾ.ಪ್ರಿಯಾ ಬಲ್ಲಾಳ್, ಡಾ.ಮುರಳೀಧರ್, ಡಾ.ಜಯಪ್ರಕಾಶ್, ಡಾ.ವಿಜಯ್ ಸೇರಿದಂತೆ ಐಲ್ಯಾಂಡ್ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ, ಅಥೆನಾ ಆಸ್ಪತ್ರೆ, ಮಂಗಳಾ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆಗಳ ಮೇಲೆ ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ..?:
ಮೂರನೇ ಗರ್ಭಾವತಿಯಾಗಿರುವ ನಾನು ಈ ಹಿಂದಿನ ಎರಡೂ ಹೆರಿಗೆ ಸಮಯದಲ್ಲಿಯೂ ವೈದ್ಯರಾಗಿದ್ದ ನಗರದ ವಿಜಯ ಕ್ಲಿನಿಕ್ ಆಸ್ಪತ್ರೆಯ ಡಾ.ಪ್ರಿಯಾ ಬಲ್ಲಾಳ್ ಅವರ ಸಲಹೆಯಂತೆ ವೈದ್ಯಕೀಯ ಆರೈಕೆ ಮಾಡಿಕೊಳ್ಳುತ್ತಿದೆ. ಆದರೆ ಮೇ 17 ರಂದು ನನಗೆ ಸ್ವಲ್ಪ ಶೀತ, ಜ್ವರ ಕಾಣಿಸಿಕೊಂಡಿದೆ. ಈ ಬಗ್ಗೆ ಡಾ.ಪ್ರಿಯಾ ಬಲ್ಲಾಳ್ ಅವರ ಸಲಹೆ ಕೇಳಿದಾಗ ಮಾತ್ರೆಗಳನ್ನು ತೆಗೆದುಕೊಂಡು ಆರಾಮು ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು.
ಆದರೂ ಜ್ವರ, ಶೀತ ಕಡಿಮೆಯಾಗದೆ ಮೈ-ಕೈ ನೋವು ಕಾಣಿಸಿಕೊಂಡಿತು. ಈ ಸಂದರ್ಭ ಮತ್ತೆ ಡಾ.ಪ್ರಿಯಾ ಬಲ್ಲಾಳ್ ಸಲಹೆ ಪಡೆದಾಗ ಕೋವಿಡ್ ಟೆಸ್ಟ್ ಮಾಡುವಂತೆ ಹೇಳಿದರು. ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಸಂದರ್ಭ ನನಗೆ 8 ತಿಂಗಳು ಪೂರ್ಣಗೊಂಡಿತ್ತು.
ಮೇ 19 ರಂದು ರಾತ್ರಿ ವೇಳೆ ಹೊಟ್ಟೆ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ನನ್ನ ಚಿಕ್ಕಪ್ಪ ಡಾ.ಪ್ರಿಯಾ ಬಲ್ಲಾಳ್ ಅವರಿಗೆ ಕರೆ ಮಾಡಿ ಕೋವಿಡ್ ಪಾಸಿಟಿವ್ ಆದ ಬಗ್ಗೆ, ಈಗಿನ ಪರಿಸ್ಥಿತಿ ಬಗ್ಗೆ ವಿಷಾದವಾಗಿ ತಿಳಿಸಿದ್ದಾರೆ. ಅದಕ್ಕೆ ಆತಂಕ ಪಡುವ ಅಗತ್ಯವಿಲ್ಲ, ಮನೆಯಲ್ಲಿಯೇ ಆರಾಮವಾಗಿ ಇರುವಂತೆ ತಿಳಿಸಿದ್ದಾರೆ. ಆದರೆ ನೋವು ಹೆಚ್ಚುತ್ತಲೇ ಇದ್ದು, ಮತ್ತೆ ಡಾ.ಪ್ರಿಯಾ ಬಲ್ಲಾಳ್ ಅವರಿಗೆ ಕರೆ ಮಾಡಿದರೆ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗದೆ ಚಿಕಿತ್ಸೆ ನೀಡುವುದಿಲ್ಲ ಎಂದಿದ್ದಾರೆ.
ಆದರೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಡಾ.ವೀಣಾ ಭಟ್ ಅವರು ತಪಾಸಣೆ ಮಾಡಿ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿ ನನ್ನ ವೈದ್ಯಕೀಯ ವರದಿಯಲ್ಲಿರುವ ಡಾ.ಪ್ರಿಯಾ ಬಲ್ಲಾಳ್ ಅವರಿಗೆ ಕರೆ ಮಾಡಿದ್ದಾರೆ. ಆ ಬಳಿಕ ಡಾ.ವೀಣಾ ಭಟ್ ಅವರು ತಮ್ಮ ಸಲಹೆಯನ್ನು ಬದಲಾಯಿಸಿ ಕೆಲವು ಮಾತ್ರೆಗಳನ್ನು ಬರೆದುಕೊಟ್ಟು ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ ಮತ್ತೆ ಮೇ 20 ರಂದು ಮತ್ತೊಮ್ಮೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಡಾ.ಪ್ರಿಯಾ ಬಲ್ಲಾಳ್ ಅವರಿಗೆ ಕರೆ ಮಾಡಿ, ಬರಬಹುದೇ ಎಂದು ವಿಚಾರಿಸಿದಾಗ ಬೇಡ ಎಂದು ಹೇಳಿದ್ದಾರೆ.
ಓದಿ: ಮಂಗಳೂರು ವೈದ್ಯರ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ
ಆದರೆ ನಾವು ಐಲ್ಯಾಂಡ್ ಆಸ್ಪತ್ರೆಗೆ ಹೋಗಿದ್ದು, ಅಲ್ಲಿಯೂ ಡಾ.ಪ್ರಿಯಾ ಬಲ್ಲಾಳ್ ಗೆ ಕರೆ ಮಾಡಿ ಏನೋ ಸಬೂಬು ಹೇಳಿ ಮನೆಗೆ ಕಳುಹಿಸಲು ನೋಡಿದ್ದಾರೆ. ಅಲ್ಲಿಂದ ಕೆಎಂಸಿ ಆಸ್ಪತ್ರೆಗೆ ಬಂದೆವು ಅಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ಅಲ್ಲಿಂದ ಲೇಡಿಗೋಷನ್ ಆಸ್ಪತ್ರೆಗೆ ಬಂದಿದ್ದೇವೆ. ಅಲ್ಲಿನ ವೈದ್ಯ ಡಾ.ವಿಜಯ್ ಎಂಬುವರು ತಪಾಸಣೆ ನಡೆಸಿ 'ಇಲ್ಲಿ ಯಾವುದೇ ವೆಂಟಿಲೇಟರ್ ಇಲ್ಲ, ಸರಿಯಾದ ಔಷಧಿಗಳಿಲ್ಲ, ಯಾವುದೇ ಸವಲತ್ತುಗಳಿಲ್ಲ' ಎಂದಿದ್ದಾರೆ. ಅಲ್ಲಿಂದ ಅಥೆನಾ ಆಸ್ಪತ್ರೆಗೆ ಹೋಗಿದ್ದೇವೆ. ಅಲ್ಲಿ ಡಾ.ಜಯಪ್ರಕಾಶ್ ಅವರು ತಪಾಸಣೆ ನಡೆಸಿ 'ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದ್ದು, ಗರ್ಭಿಣಿ ಕೂಡಾ ಅರ್ಧಗಂಟೆಯಲ್ಲಿ ಮೃತಪಡುತ್ತಾರೆ' ಎಂದು ಹೇಳಿದ್ದಾರೆ.
ಇದರಿಂದ ಹೆದರಿದ ನಮ್ಮ ಕುಟುಂಬಸ್ಥರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಚೊಕ್ಕಬೆಟ್ಟಿನ ಮೊಹಮ್ಮದ್ ಆಸೀಫ್ ಎಂಬುವರನ್ನು ಸಂಪರ್ಕಿಸಿದ್ದಾರೆ. ಅವರು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಫೋನ್ ಮಾಡಿದ್ದಾರೆ. ಬಳಿಕ ಡಿಎಚ್ಒ ಹಾಗೂ ಮೊಹಮ್ಮದ್ ಆಸೀಫ್ ಅವರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಡಾ.ಶರಣ್ ಹಾಗೂ ಡಾ.ಶ್ರದ್ಧಾ ಎಂಬ ಕಿರಿಯ ವೈದ್ಯರು ಮುತುರ್ವಜಿ ವಹಿಸಿ ಹೆರಿಗೆ ಮಾಡಿಸಿದ್ದು, ತಾಯಿ-ಮಗು ಸುರಕ್ಷಿತವಾಗಿದ್ದಾರೆ. ನನಗೆ ಕೋವಿಡ್ ಇರುವುದರಿಂದ ಬಳಿಕ ನನ್ನನ್ನು ಅಲ್ಲಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಡಾ.ಮುರಳೀಧರ್ ಎಂಬುವರು ನನಗೆ ಮಾನಸಿಕವಾಗಿ ಹಿಂಸೆ ನೀಡಿ ಬೆದರಿಕೆ ಹುಟ್ಟುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಯಿಂದ ನಾವು ನಮ್ಮ ಕುಟುಂಬಸ್ಥರು ಬಹಳ ನೊಂದಿದ್ದು, ಆದ್ದರಿಂದ ಈ ದೂರಿನನ್ವಯ ಸೂಕ್ತ ಕ್ರಮ ಜರುಗಿಸಬೇಕೆಂದು ತಿಳಿಸಿದ್ದಾರೆ. ಈ ನಡುವೆ, ದೂರು ನೀಡಿರುವ ಖತೀಜಾ ಜಾಸ್ಮಿನ್ ಅವರ ಚಿಕ್ಕಪ್ಪ ಸಂಶೀರ್ ಅಲಿ, ಸರ್ಫ್ ರಾಜ್ ಹಾಗೂ ಮತ್ತೋರ್ವ, ಡಾ.ಜಯಪ್ರಕಾಶ್ ಅವರಿಗೆ ಅಥೆನಾ ಆಸ್ಪತ್ರೆಯ ಕಾಂಪೌಂಡ್ ಒಳಗೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಂಶೀರ್ ಅಲಿ, ಸರ್ಫ್ ರಾಜ್ ರನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ಮತ್ತೋರ್ವನ ಬಂಧನ ಇನ್ನಷ್ಟೇ ಆಗಬೇಕಿದೆ.