ಸುಳ್ಯ(ದಕ್ಷಿಣ ಕನ್ನಡ): ಕೊರೊನಾ ಪಾಸಿಟಿವ್ ಬಂದಿರುವ ದಂಪತಿ ವೃದ್ಧ ತಾಯಿಯೊಬ್ಬರನ್ನೇ ಮನೆಯೊಳಗೆ ಕೂಡಿ ಹಾಕಿ ತೆರಳಿರುವ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ.
ಸುಳ್ಯದ ಆಸುಪಾಸಿನಲ್ಲಿ ಬಳೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ಧ ರಾಜೇಶ್ವರಿ ಎಂಬವರು ತನ್ನ ಪತಿ ವಿನಯಕುಮಾರ್ ಹಾಗೂ ವೃದ್ಧ ತಾಯಿಯ ಜತೆ ಗಾಂಧಿನಗರ ಸಂತೋಷ್ ಚಿತ್ರಮಂದಿರ ಎದುರಿನ ಬಿಲ್ಡಿಂಗ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ರಾಜೇಶ್ವರಿ ಮತ್ತು ವಿನಯ ಕುಮಾರ್‌ಗೆ ಕಳೆದ ವಾರ ಕೊರೊನಾ ಪರೀಕ್ಷೆ ನಡೆಸಿದ್ದು ವರದಿ ಪಾಸಿಟಿವ್ ಬಂದಿತ್ತು. ಈ ವಿಷಯ ಅರಿತ ದಂಪತಿ ಶನಿವಾರ ತಾವಿದ್ದ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ಬೇರೆ ಕಡೆಗೆ ತೆರಳಿದ್ದಾರೆ. ದಿನದ ಕೋವಿಡ್ ವರದಿ ಪಡೆಯುವ ಸಲುವಾಗಿ ಆರೋಗ್ಯ ಇಲಾಖೆಯವರು ಫೋನ್ ಮಾಡಿದಾಗ ಫೋನ್ ಕರೆ ಸ್ವೀಕರಿಸಿಲ್ಲ. ಆರೋಗ್ಯ ಇಲಾಖೆಯವರು ನೀಡಿದ ವಿಳಾಸವನ್ನು ಹುಡುಕಿಕೊಂಡು ಬಂದಾಗ ಮನೆಗೆ ಬೀಗ ಹಾಕಲಾಗಿತ್ತು.
ನಿನ್ನೆ ಬೆಳಗ್ಗೆ ಮನೆಯೊಳಗಿದ್ದ ವೃದ್ಧೆಯೊಬ್ಬರು ಜೋರಾಗಿ ಕಿರುಚುತ್ತಿದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರು ಬಾಗಿಲು ತೆರೆದು ವೃದ್ಧೆಯನ್ನು ವಿಚಾರಿಸಿದಾಗ ಮೂರು ದಿನಗಳಿಂದ ಆಕೆ ಉಪವಾಸದಲ್ಲಿದ್ದ ವಿಚಾರ ಬಹಿರಂಗವಾಗಿದೆ. ತಕ್ಷಣವೇ ವೃದ್ಧೆಗೆ ಆಹಾರದ ವ್ಯವಸ್ಥೆ ಮಾಡಲಾಯಿತು.
ಇದನ್ನೂ ಓದಿ: ಮಂಗಳೂರಲ್ಲಿ ಕಾರುಗಳ ಗಾಜು ಒಡೆದು ಸರಣಿ ಕಳ್ಳತನ: ಯುಪಿ ಮೂಲದ ಆರೋಪಿಗಳಿಗಾಗಿ ಶೋಧ
ಮಧ್ಯಾಹ್ನ ತಾಲೂಕು ಆರೋಗ್ಯಾಧಿಕಾರಿಯ ಡಾ.ನಂದಕುಮಾರ್ ನೇತೃತ್ವದಲ್ಲಿ ವೃದ್ಧೆಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈಕೆಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. ನಂತರದಲ್ಲಿ ಅಧಿಕಾರಿಗಳು ವೃದ್ಧೆಯ ಮಕ್ಕಳನ್ನು ಕರೆಸಿದ್ದು, ಇವರು ಆಸ್ಪತ್ರೆಗೆ ಹೋಗದೆ ತಾಲೂಕು ಕಚೇರಿಯ ಮುಂದೆ ಕುಳಿತು ಪ್ರತಿಭಟಿಸಿದ ಘಟನೆಯೂ ನಡೆದಿದೆ. ನಂತರ ಮನವೊಲಿಸಿದ ಅಧಿಕಾರಿಗಳು ಸುಳ್ಯದ ಅರಂತೋಡಿನಲ್ಲಿರುವ ಮಗನ ಮನೆಗೆ ವೃದ್ಧೆ ಹಾಗೂ ಪುತ್ರಿಯನ್ನು ಕಳುಹಿಸಿದ್ದಾರೆ.
ಆದರೆ ಅವರು ಅಲ್ಲಿಗೂ ಹೋಗದೇ ಸ್ಥಳೀಯ ಕಟ್ಟಡವೊಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ. ಇದೀಗ ಆರೋಗ್ಯ ಅಧಿಕಾರಿಗಳು ಈ ಸ್ಥಳಕ್ಕೆ ತೆರಳಿ ಇವರನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.