ಮಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಾಳೆಯಿಂದ ಅಗತ್ಯ ಸೇವೆಗಳ ಮಳಿಗೆಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರಗೆ ಮಾತ್ರ ತೆರೆದಿರುತ್ತವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿನಾಯಿತಿ ನೀಡಿದ ವೇಳೆಯಲ್ಲಿ ಆಹಾರ, ಪಡಿತರ ಅಂಗಡಿ, ಹಾಲು, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ, ಸಗಟು ಹಾಗೂ ಚಿಲ್ಲರೆ ವ್ಯಾಪಾರ ಅಂಗಡಿಗಳು ಮಾತ್ರ ತೆರೆದಿರುತ್ತವೆ. ವೈದ್ಯಕೀಯ ಉಪಕರಣ, ಔಷಧಿ, ಅಡುಗೆ ಅನಿಲ, ಇಂಧನ ಹಾಗೂ ಕೃಷಿ ಉತ್ಪನ್ನ, ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದವು ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೋವಿಡ್-19 ಸೋಂಕು ಹಬ್ಬುವುದನ್ನು ತಡೆಯಲು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಜನರ ಹಿತದೃಷ್ಟಿಯಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಓಲಾ, ಉಬರ್, ಟ್ಯಾಕ್ಸಿ ವಾಹನ ಹಾಗೂ ಆಟೋರಿಕ್ಷಾಗಳ ಸಂಚಾರಕ್ಕೆ ನಿಷೇಧ ಇರುತ್ತದೆ. ತುರ್ತುಪರಿಸ್ಥಿತಿ ಹಾಗೂ ಅಗತ್ಯ ಸೇವೆಗಳ ಸಂದರ್ಭದಲ್ಲಿ ಮಾತ್ರ ವಾಹನಗಳನ್ನು ಬಳಸಬಹುದು. ಈ ಆದೇಶವು ಜಿಲ್ಲೆಯಾದ್ಯಂತ ಮಾರ್ಚ್ 22ರ ರಾತ್ರಿ 9 ಗಂಟೆಯಿಂದ ಮಾರ್ಚ್ 31ರ ಮಧ್ಯರಾತ್ರಿ 12ರವರೆಗೆ ಜಾರಿಯಲ್ಲಿರುತ್ತದೆ ಎಂದು ಸೂಚಿಸಿದ್ದಾರೆ.