ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾಂಪ್ರಬೈಲು ಶ್ರೀ ಅಜ್ಜಾವರ ದೈವಸ್ಥಾನಕ್ಕೆ ದೈವದ ಭಂಡಾರವನ್ನು ಉತ್ಸವದ ಸಂದರ್ಭ ಬಾಳ್ತಿಲಬೀಡಿನಿಂದ ಕೊಂಡು ಹೋಗಿ ಉತ್ಸವ ಮುಗಿದ ಬಳಿಕ ಮರಳಿ ಬಾಳ್ತಿಲಬೀಡಿಗೆ ತೆಗೆದುಕೊಂಡು ಹೋಗುವುದು ವಾಡಿಕೆ.
ಆದರೆ, ಈ ಬಾರಿ ದೈವಸ್ಥಾನದ ಆಡಳಿತ ಮಂಡಳಿ ದೈವದ ಭಂಡಾರವನ್ನು ಮರಳಿಸಿಲ್ಲ. ಈ ಕುರಿತು ಕೋರ್ಟ್ ಆದೇಶ ಇದ್ದರೂ ಪಾಲನೆ ಮಾಡಿಲ್ಲ ಎಂದು ಬಾಳ್ತಿಲಬೀಡಿನ ಮನೆಯವರು ದೂರಿದ್ದಾರೆ. ಕಾಂಪ್ರಬೈಲು ಶ್ರೀ ಅಜ್ಜಾವರ ದೈವಸ್ಥಾನಕ್ಕೆ ಬಾಳ್ತಿಲಬೀಡಿನಿಂದ ಆಗಮಿಸಿದ ಭಂಡಾರವನ್ನು ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶ ನೀಡಿದರೂ ವ್ಯವಸ್ಥಾಪನಾ ಸಮಿತಿ ಭಂಡಾರ ಹಿಂದಿರುಗಿಸಿಲ್ಲ ಎಂದು ಬಾಳ್ತಿಲಬೀಡಿನವರು ದೂರಿದ್ದಾರೆ.
ಇದು ಉತ್ಸವದ ಕೊನೆಯ ದಿನ ಸ್ಥಳೀಯರಲ್ಲಿ ಚರ್ಚೆಗೂ ಕಾರಣವಾಯಿತು. ಈ ಕುರಿತು ಬಾಳ್ತಿಲಬೀಡಿನ ಮನೆಯವರು ದ.ಕ.ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ವ್ಯವಸ್ಥಾಪನಾ ಸಮಿತಿಗೆ ಪತ್ರ ಬರೆಯಲಾಗಿದೆ ಎಂದು ದ.ಕ.ಜಿಲ್ಲಾ ಮುಜರಾಯಿ ಇಲಾಖೆ ತಿಳಿಸಿದೆ.
ಭಂಡಾರದ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಮುಂದಿನ ಆದೇಶದವರೆಗೆ ಮಧ್ಯಂತರ ಆದೇಶ ನೀಡಿದೆ. ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಬಳಿಕ ದೈವದ ಮೂರ್ತಿ(ಐಡಲ್ಸ್)ಗಳನ್ನು ಹಿಂತಿರುಗಿಸುವಂತೆ ತಿಳಿಸಿದೆ.
ಆದರೆ, ವ್ಯವಸ್ಥಾಪನಾ ಸಮಿತಿಯವರು ಭಂಡಾರ ಹಿಂತಿರುಗಿಸಿಲ್ಲ ಎಂದು ಅಕ್ಟೋಬರ್ 18ರಂದು ದ.ಕ.ಜಿಲ್ಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಗೆ ದೂರು ನೀಡಿದ್ದರು. ಈ ವಿಚಾರವು ಹಿಂದೆ ಧಾರ್ಮಿಕ ದತ್ತಿ ಪರಿಷತ್ತಿನ ಸಭೆಯಲ್ಲೂ ಚರ್ಚೆಯಾಗಿದೆ. ಪ್ರಸ್ತುತ ನವರಾತ್ರಿಯ ಬಳಿಕ ಭಂಡಾರ ಹಿಂದಿರುಗಿಸದ ಕುರಿತು ಬಾಳ್ತಿಲಬೀಡಿನವರು ದೂರು ನೀಡಿದ್ದರು.
ಹೀಗಾಗಿ, ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಮುಜರಾಯಿ ಇಲಾಖೆ ಎಸಿಯವರು ತಿಳಿಸಿದ್ದಾರೆ. ಶ್ರೀ ಉಳ್ಳಾಲ್ತಿ ಮತ್ತು ಅಜ್ವಾರ ದೈವಗಳಿಗೆ ಅನಾದಿ ಕಾಲದಿಂದಲೂ ಬಾಳ್ತಿಲಬೀಡು ವಂಶಸ್ಥರಿಂದ ನಿತ್ಯಪೂಜೆ ನಡವಳಿಗಳು ನಡೆದುಕೊಂಡು ಬರುತ್ತಿರುವುದು ರೂಢಿ.
ಆದರೆ, ಇತ್ತೀಚೆಗೆ ರಚನೆಯಾದ ನೂತನ ವ್ಯವಸ್ಥಾಪನಾ ಸಮಿತಿಯು, ಭಂಡಾರವನ್ನು ಉತ್ಸವಗಳಿಗೆ ಬರಮಾಡಿಕೊಂಡು ಆನಂತರದಲ್ಲಿ ಭಂಡಾರವನ್ನು ಹಿಂದಕ್ಕೆ ಪುನಃ ಬಾಳ್ತಿಲಬೀಡಿಗೆ ಕಳುಹಿಸಲಾಗುವುದಿಲ್ಲ. ಹೊರತಾಗಿ ದೈವಸ್ಥಾನದಲ್ಲೇ ಇಡಲಾಗುವುದು ಎಂದು ನಿರ್ಣಯಿಸಿದ ವೇಳೆಯಲ್ಲಿ ಸಂಬಂಧಪಟ್ಟ ಗುತ್ತಿನ ಪ್ರಮುಖರು ಪ್ರಸ್ತುತ ವ್ಯವಸ್ತಾಪನಾ ಸಮಿತಿಯ ತೀರ್ಮಾನಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದರು.