ಮಂಗಳೂರು/ ಚಾಮರಾಜನಗರ/ ಮೈಸೂರು/ ಶಿವಮೊಗ್ಗ : ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಮೂಲಕ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಮಂಗಳೂರಿನಲ್ಲಿ ದ. ಕ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370, 35ಎ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ ನಡೆಸಲಾಯ್ತು. ಈ ನಿರ್ಧಾರದ ಮೂಲಕ ರಕ್ತಕ್ರಾಂತಿ ಮಾಡುವ ಸವಾಲು ಹಾಕಿದ ಪಿಡಿಪಿ ಮತ್ತು ಓಮರ್ ಅಬ್ದುಲ್ಲಾ ಅವರ ಎನ್ಸಿ ಪಾರ್ಟಿಗೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಶಾಸಕ ಯೋಗೀಶ್ ಭಟ್ ಹೇಳಿದರು.
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸಿದೆ. ಬಿಜೆಪಿ ಪ್ರತಿ ಬಾರಿ ಪ್ರಣಾಳಿಕೆಯಲ್ಲಿ ನೀಡುತ್ತಿದ್ದ ಭರವಸೆ ಈಡೇರಿದಂತಾಗಿದೆ ಎಂದರು. ಕಾರ್ಯಕರ್ತರುಗಳು ಸಿಹಿತಿಂಡಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಪಟ್ಟರು.
ರಾಷ್ಟ್ರಧ್ವಜ ಹಿಡಿದು ಗಡಿಜಿಲ್ಲೆಯಲ್ಲಿ ಸಂಭ್ರಮಾಚರಣೆ...
ಕಾಶ್ಮೀರಕ್ಕಿದ್ದ ವಿಶೇಷ ಹಕ್ಕು ರದ್ದಾದ ಹಿನ್ನೆಲೆಯಲ್ಲಿ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. 370 ವಿಧಿ ರದ್ದು ಮಾಡಿ ಕಾಶ್ಮೀರವನ್ನು ಪ್ರತ್ಯೇಕವಾದಿಗಳ ಮುಷ್ಟಿಯಿಂದ ಪಾರು ಮಾಡುವ ದಿಟ್ಟ ಹೆಜ್ಜೆಯನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ನರೇಂದ್ರ ಮೋದಿ, ಅಮಿತ್ ಶಾ ಪರ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ತಿರಂಗಾ ಹಿಡಿದು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಸಂಭ್ರಮಾಚರಣೆ...
ಸಾಂಸ್ಕ್ರತಿಕ ನಗರಿಯಲ್ಲೂ ಬಿಜೆಪಿ, ಎಬಿವಿಪಿ ಸೇರಿದಂತೆ ವಿವಿಧ ಸಂಘಟನೆಗಳು ಸಂಭ್ರಮಾಚರಣೆ ಮಾಡಿದೆ. ಭಾರತ ಮಾತೆಗೆ ಶಾಸಕ ಎಸ್ ಎ ರಾಮದಾಸ್ ಪುಷ್ಪಾರ್ಚನೆ ಮಾಡಿದರು. ಭಾರತ ಮಾತೆಗೆ ಜೈಕಾರ ಕೂಗುತ್ತಾ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಗುಣಗಾನ ಮಾಡಿದರು. ದೇಶಕ್ಕೆ ಒಂದೇ ಕಾನೂನು ಇದ್ದರೆ, ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಇತ್ತು. ಆದರೆ, ಈಗ ದೇಶಕ್ಕೆ ಒಂದೇ ಕಾನೂನು ಎಂಬ ಸಂದೇಶವನ್ನು ಇಂದು ಲೋಕಸಭೆಯಲ್ಲಿ ಸಾರಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾರ್ಯಕರ್ತರು ಸಂಭ್ರಮಿಸಿದರು.
ಶಿವಮೊಗ್ಗದಲ್ಲಿ ಸಂಭ್ರಮಾಚರಣೆ...
ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ನೀಡುವ 370 ಹಾಗೂ 35 (ಎ) ಅನ್ನು ರದ್ದು ಮಾಡಿರುವುದರಿಂದ ಶಿವಮೊಗ್ಗದಲ್ಲಿ ಸಂಘ ಪರಿವಾರದವರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನಗರದ ಶಿವಪ್ಪನಾಯಕ ವೃತ್ತದಲ್ಲಿ ಸಂಘ ಪರಿವಾರದ ನಾಯಕರುಗಳು ಹಾಗೂ ಬಿಜೆಪಿಯ ಹಿರಿಯನಾಯಕರು ಹಾಗೂ ಕಾರ್ಯಕರ್ತರು ಕಾಶ್ಮೀರ ಇಷ್ಟು ದಿನ ನಮ್ಮೊಂದಿಗೆ ಇದ್ದರೂ ಸಹ ಇಲ್ಲದಂತೆ ಇತ್ತು. ಈಗ ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಪ್ರಾತಿನಿಧ್ಯವನ್ನು ರದ್ದು ಮಾಡಿದ್ದು ನಿಜಕ್ಕೂ ಸಂತೋಷ ತಂದಿದೆ. ಕೇಂದ್ರ ಸರ್ಕಾರದ ಈ ಕ್ರಮ ಸ್ವಾಗತಾರ್ಹವಾಗಿದೆ ಎಂದು ಭಾರತ ಮಾತೆಗೆ ಘೋಷಣೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿಯ ಪಾಲಿಕೆ ಸದಸ್ಯರುಗಳು ಹಾಜರಿದ್ದರು.