ಮಂಗಳೂರು: ನಗರದ ನಾಲ್ವರು ಬೈಕ್ ರೈಡರ್ಸ್ ಸಿಕ್ಕಿಂನ ಕಟಾವ್‌ನಲ್ಲಿರುವ ಚೀನಾ ಗಡಿ ಪ್ರದೇಶದಲ್ಲಿ ನಿಂತು ಇತ್ತೀಚೆಗೆ ತುಳುನಾಡ ಧ್ವಜ ಹಾರಿಸಿದ್ದಾರೆ. ಅಲ್ಲದೆ ಹಿಮಾಚಲ ಪ್ರದೇಶದ ಹಿಕ್ಕಿಂನಲ್ಲಿರುವ ವಿಶ್ವದ ಅತೀ ಎತ್ತರದ ಅಂಚೆ ಕಚೇರಿಯಿಂದ ಪ್ರಧಾನಿ ಮೋದಿಯವರಿಗೆ 'ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ' ಮಾಡಬೇಕೆಂದು ಪತ್ರ ಬರೆದು ತಮ್ಮ ತುಳುಭಾಷಾ ಪ್ರೇಮ ಮೆರೆದಿದ್ದಾರೆ.
ಕರಾವಳಿಯ ಜನಪ್ರಿಯ ಯೂಟ್ಯೂಬರ್ ಸಚಿನ್ ಶೆಟ್ಟಿ, 'ಅನ್ನಿ' ಅರುಣ್, ಅರ್ಜುನ್ ಪೈ, ಸಾಯಿಕಿರಣ್ ಶೆಟ್ಟಿ ಹಾಗೂ ಅನ್ನಿ ಅರುಣ್ ಪತ್ನಿ ಭಾಗ್ಯಲಕ್ಷ್ಮಿಯವರ ತಂಡ ಬೈಕ್ ರೈಡಿಂಗ್ ತಂಡದಲ್ಲಿತ್ತು. ಈ ತಂಡವು ಸುಮಾರು 9000 ಕಿ.ಮೀ. ದೂರ ಬೈಕ್ ರೈಡಿಂಗ್ ಮಾಡಿ ಈ ಸಾಧನೆ ಮಾಡಿದೆ. ಸಚಿನ್ ಶೆಟ್ಟಿ ಹಾಗೂ ಅರ್ಜುನ್ ಪೈ ದೆಹಲಿಯಿಂದ ತಮ್ಮ ಬೈಕ್ ಸವಾರಿ ಆರಂಭಿಸಿದ್ದರು. ಇವರೊಂದಿಗೆ ಸಾಯಿಕಿರಣ್ ಶೆಟ್ಟಿ, ಅನ್ನಿ ಅರುಣ್, ಭಾಗ್ಯಲಕ್ಷ್ಮಿಯವರ ತಂಡ ಹಿಮಾಚಲ ಪ್ರದೇಶದಲ್ಲಿ ಜೊತೆಯಾಗಿದೆ.
ಫೆ.26ರಂದು ಡೆಲ್ಲಿಯಿಂದ ಬೈಕ್ ರೈಡಿಂಗ್ ಆರಂಭಿಸಿ ಉತ್ತರ ಪ್ರದೇಶ, ಬಿಹಾರ್, ಸಿಕ್ಕಿಂ, ಕಟಾವ್(ಚೀನಾ ಬಾರ್ಡರ್), ಹಿಮಾಚಲ ಪ್ರದೇಶ, ಉತ್ತರಾಖಂಡ, ನೇಪಾಳ ಸಂಚರಿಸಿದ ತಂಡ ಆ ಬಳಿಕ ಉತ್ತರ ಪ್ರದೇಶ, ಬಿಹಾರ್ ಮಾರ್ಗವಾಗಿ ಮರಳಿ ಬಂದಿದೆ. ಈಗ ಅತ್ಯಂತ ಚಳಿ ಇರುವ ಕಾಲವಾದ್ದರಿಂದ ಇದು ಬೈಕ್ ರೈಡಿಂಗ್‌ಗೆ ಪ್ರಶಸ್ತವಲ್ಲ. ಆದರೂ ಧೈರ್ಯದಿಂದ -12°C ಚಳಿಯಲ್ಲಿ ಹಿಮಪಾತಗಳ ಮಧ್ಯೆ ತಂಡ ಬೈಕ್ ರೈಡಿಂಗ್ ತಮ್ಮ ಗುರಿ ಮುಟ್ಟಿದೆ.
ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ರನ್ ವೇನಲ್ಲಿ ಕಾಣಿಸಿಕೊಂಡ ನಾಯಿಗಳು : ಪಲ್ಟಿಯಾದ ಲಘು ವಿಮಾನ