ಸುಳ್ಯ(ದಕ್ಷಿಣ ಕನ್ನಡ): ಸುಳ್ಯದ ವೆಂಕಟರಮಣ ಸೊಸೈಟಿಯ ಸಮೀಪ ನಿನ್ನೆ(ಭಾನುವಾರ) ರಾತ್ರಿ 10:30ರ ಸುಮಾರಿಗೆ ವ್ಯಕ್ತಿಯೊಬ್ಬನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಗುರಿ ತಪ್ಪಿ ಕಾರಿಗೆ ತಾಗಿದ್ದರಿಂದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಕಸಬಾ ಗ್ರಾಮದ ಜಯನಗರ ನಿವಾಸಿ ಮಹಮ್ಮದ್ ಸಾಯಿ ಎಂಬವರು ಸುಳ್ಯದ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಹತ್ತಿರವಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಳಿ ತನ್ನ ಕ್ರೇಟಾ (KA21P6869) ಕಾರನ್ನು ನಿಲ್ಲಿಸಿ ತಂಗಿಯ ಮನೆಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗಿ ಅವರು ತನ್ನ ಕಾರು ಏರುತ್ತಿರುವ ಸಂದರ್ಭ ಹಿಂದಿನಿಂದ ಸ್ಕಾರ್ಪಿಯೋ ವಾಹನದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಹಮ್ಮದ್ ಸಾಯಿಯವರ ಕಡೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಅದೃಷ್ಟವಶಾತ್ ಗುಂಡು ಕಾರಿಗೆ ತಗುಲಿದ್ದು, ಕಾರು ಜಖಂಗೊಂಡಿದೆ. ಗುಂಡಿನ ಚಿಲ್ಡ್ ಹಾರಿದ ಪರಿಣಾಮ ಶಾಯಿಯವರ ಹೊಟ್ಟೆಯ ಸಮೀಪಕ್ಕೆ ಗಾಯವಾಗಿದ್ದು, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಾರ್ಥನೆ ವೇಳೆ ಗುಂಡು - ಬಾಂಬ್ ದಾಳಿ.. ಚರ್ಚ್ನಲ್ಲಿ ಪ್ರಾಣಬಿಟ್ಟ 50ಕ್ಕೂ ಹೆಚ್ಚು ಭಕ್ತಾದಿಗಳು!