ಮಂಗಳೂರು: ವಿದ್ಯಾರ್ಥಿನಿವೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಜೊತೆಗೆ ಈ ದುಷ್ಕೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಹಾಗೂ ದಲಿತ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪುತ್ತೂರು ಕಾಲೇಜೊಂದರ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಇಂದು ಹೈಕೋರ್ಟ್ ಜಾಮೀನು ನೀಡಿದೆ.
ಬಜತ್ತೂರು ಗ್ರಾಮದ ಗುರುನಂದನ್ (19), ಪೆರ್ನೆಯ ಪ್ರಜ್ವಲ್ (19), ಪೆರ್ನೆ ಕಿಶನ್ (19), ಆರ್ಯಾಪು ಗ್ರಾಮದ ಸುನಿಲ್ (19) ಮತ್ತು ಬಂಟ್ವಾಳದ ಪ್ರಖ್ಯಾತ್ (19) ಈ ಪ್ರಕರಣದ ಆರೋಪಿಗಳು. ಈಗ ಪ್ರಜ್ವಲ್ಗೆ ಜಾಮೀನು ದೊರೆತಿದೆ.
ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಜುಲೈ 5ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಆರೋಪಿ ಪರ ವಕೀಲ ಕಜೆ ಲಾ ಚೇಂಬರ್ಸ್ನ ಮಹೇಶ್ ಕಜೆ ವಾದಿಸಿದರು. ಪ್ರಕರಣದಲ್ಲಿ ಇನ್ನುಳಿದ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ.
ಮಾರ್ಚ್ ತಿಂಗಳಲ್ಲಿ ಎಸಗಿದ್ದ ಈ ದುಷ್ಕೃತ್ಯದ ವಿಡಿಯೋವನ್ನು ಜುಲೈನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕೃತ್ಯವು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಕಠಾರ ಎಂಬಲ್ಲಿ ಸಂಭವಿಸಿದೆ ಎಂದು ಸಂತ್ರಸ್ತ ಯುವತಿ ನೀಡಿದ ದೂರಿನ ಆಧರಿಸಿ ಪ್ರಕರಣ ದಾಖಲಾಗಿತ್ತು.
ಕಾಲೇಜಿನಿಂದ ಮನೆಗೆ ಹೊರಟ್ಟಿದ ಯುವತಿಯನ್ನು ಪುತ್ತೂರಿನಲ್ಲಿ ತಡೆದು ನೋಟ್ಸ್ ಬೇಕು ಎಂದು ಕೇಳಿ, ಬಳಿಕ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕಲಂ 341, 376, (ಡಿ) 34 ಐಪಿಸಿ ಮತ್ತು 3(1), (1)(11), 3(2) ವಿ ಎಸ್ಸಿ/ಎಸ್ಟಿ ಪಿಎ ಅಮೆಂಡ್‌ಮೆಂಟ್ ಆ್ಯಕ್ಟ್ 2015ರಂತೆ ಮತ್ತು 66ಇ, 67ಎ ವಿಧಿಯಡಿ ಪ್ರಕರಣ ದಾಖಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ನ್ಯಾಯಾಲಯ ಕಳೆದ ತಿಂಗಳು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅರೋಪಿಗಳು ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.