ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಯುಪಿ ಚುನಾವಣೆಗಾಗಿ 15 ದಿನ ಸರ್ಕಾರಿ ಹಣದಲ್ಲಿ ಓಡಾಡಿ ಮತಯಾಚನೆ ಮಾಡಲು ಮುಂದಾಗಿದ್ದಾರೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆಂದೂ ಯಾವ ಪ್ರಧಾನಿಯೂ ಸಹ ಇಷ್ಟೊಂದು ದಿವಸ ಸರ್ಕಾರಿ ಕಾರ್ಯಕ್ರಮ ನಡೆಸಿ, ಮತ ಸೆಳೆಯುವ ಕೆಲಸ ಮಾಡಿಲ್ಲ.
ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಕಾರ್ಯಕ್ರಮದ ಮೂಲಕ ಮತಯಾಚನೆ ಮಾಡುವುದಕ್ಕೆ ಮುಂದಾಗಿದ್ದಾರೆ. ನಿಮ್ಮ ಪಕ್ಷದ ಕಾರ್ಯಕ್ರಮ ಪ್ರತ್ಯೇಕವಾಗಿ ಮಾಡಿ ಎಂದು ಖರ್ಗೆ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಅಧಿವೇಶನ ನಡೆದಿದೆ. ಪಾರ್ಲಿಮೆಂಟ್ನಲ್ಲಿ ಮೋದಿಯವರು ಇರಬೇಕು. ಆದರೆ, ಅವರು ಪಾರ್ಲಿಮೆಂಟ್ಗೆ ಬರುತ್ತಿಲ್ಲ. ಉಳಿದ ಪ್ರಧಾನಿಗಳು ಒಂದೆರೆಡು ದಿನವಾದರೂ ಬಂದು ಪಾರ್ಲಿಮೆಂಟ್ನಲ್ಲಿ ಕುಳಿತು ಹೋಗುತ್ತಾರೆ. ಆದರೆ, ಇವರು ಬರೋದೇ ಇಲ್ಲ.
ಆರಂಭದ ದಿನ ಬಂದು ಒಂದೇ ಮಾತರಂ ಹೇಳಿ ಹೋದ್ರು ಅಷ್ಟೇ.. ದೇಶ ಮತ್ತು ದೇಶದ ಜನತೆಯನ್ನ ಈ ರೀತಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವವನ್ನು ಹಾಳು ಮಾಡುವಂತಹ ಕೆಲಸಕ್ಕೆ ಪ್ರಧಾನಿಗಳು ಮುಂದಾಗಿದ್ದಾರೆ. ಇದು ಪ್ರಧಾನಿ ಹುದ್ದೆಗೆ ಗೌರವ ತರುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಜಾಬ್ನಲ್ಲಿ 22 ರೈತ ಸಂಘಟನೆಗಳಿಂದ ಎಸ್ಎಸ್ಎಂ ಪಕ್ಷ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ತತ್ವ , ಜೊತೆಯಲ್ಲಿ ಪಕ್ಷದ ತತ್ವದ ಸಲುವಾಗಿ ಹೋರಾಟ ಮಾಡುತ್ತಿದ್ದೇೆವೆ. ಆದರೆ, ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಗ್ಯಾರೆಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಡಿಕೆಶಿ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಕುರಿತು ಈಶ್ವರ್ ಖಂಡ್ರೆ ಮಾತನಾಡುತ್ತಾರೆ ಎಂದರು.
ಇದನ್ನೂ ಓದಿ: ಮನ್ ಕಿ ಬಾತ್: ಇಂದು ದೇಶದ ಜನತೆಯನ್ನುದ್ದೇಶಿಸಿ ಮೋದಿ ಮನದ ಮಾತು